ಪಾಟ್ನಾ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 220 ಸ್ಥಾನ ಗೆಲ್ಲುತ್ತೇವೆ ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೇಳಿಕೆಯನ್ನು ಜನ ಸುರಾಜ್ ಪಕ್ಷದ ಸಂಸ್ಥಾಪಕ ಮತ್ತು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೋಮವಾರ ಲೇವಡಿ ಮಾಡಿದ್ದಾರೆ. ನಿತೀಶ್ ಅವರ ಹೇಳಿಕೆಯನ್ನು ತಳ್ಳಿ ಹಾಕಿದ ಕಿಶೋರ್, ಈ ಚುನಾವಣೆಯಲ್ಲಿ ಜನತಾದಳ (ಯುನೈಟೆಡ್) ಕೇವಲ 20 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಭವಿಷ್ಯ ನುಡಿದರು.
"ಬಿಹಾರದ ಜನರು ನಿತೀಶ್ ಕುಮಾರ್ ಬಗ್ಗೆ ಭ್ರಮನಿರಸನಗೊಂಡಿದ್ದಾರೆ ಮತ್ತು ಮುಂಬರುವ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಲು ಸಿದ್ಧರಾಗಿದ್ದಾರೆ. ಬಿಜೆಪಿ ಮತ್ತು ನಿತೀಶ್ ಕುಮಾರ್ ಇಬ್ಬರಿಗೂ ಚುನಾವಣೆಯಲ್ಲಿ ಸೋಲಾಗಲಿದೆ. ನಿತೀಶ್ ಕುಮಾರ್ ಅವರ ಆಡಳಿತದಿಂದ, ವಿಶೇಷವಾಗಿ ಅವರ ಅಧಿಕಾರಿ ರಾಜ್ ಆಡಳಿತದಿಂದ ಸಾರ್ವಜನಿಕರು ನಿರಾಶೆಗೊಂಡಿದ್ದಾರೆ. ಅಧಿಕಾರಿಗಳ ಅತಿಯಾದ ನಿಯಂತ್ರಣದಲ್ಲಿ ಮತ್ತು ಜವಾಬ್ದಾರಿ ಇಲ್ಲದ ಆಡಳಿತ ನಡೆಯುತ್ತಿದೆ" ಎಂದು ಕಿಶೋರ್ ಹೇಳಿದರು.
ಜೆಡಿಯು ಎನ್ಡಿಎ ಅಥವಾ ಮಹಾ ಮೈತ್ರಿಕೂಟದೊಂದಿಗೆ ಮೈತ್ರಿ ಮಾಡಿಕೊಂಡರೂ, ಪಕ್ಷದ ಯಶಸ್ಸಿನ ಸಾಧ್ಯತೆಗಳು ಕಡಿಮೆ ಎಂದು ಕಿಶೋರ್ ವಾದಿಸಿದರು.
"ನಿತೀಶ್ ಕುಮಾರ್ ರಾಜಕೀಯ ಹೊರೆಯಾಗಿದ್ದಾರೆ ಮತ್ತು ಯಾವುದೇ ಪಕ್ಷವು ಅವರನ್ನು ಬೆಂಬಲಿಸಲು ಬಯಸುತ್ತಿಲ್ಲ ಎಂಬುದನ್ನು ಬಿಜೆಪಿ ಗುರುತಿಸಿದೆ" ಎಂದು ಅವರು ತಿಳಿಸಿದರು.
"ಬಿಜೆಪಿಯು ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿಯೇ ಮುಂದಿನ ಬಿಹಾರ ವಿಧಾನಸಭಾ ಚುನಾವಣೆಯನ್ನು ಎದುರಿಸುವ ಅನಿವಾರ್ಯತೆಯಲ್ಲಿದೆ. ಇಂಥದೊಂದು ಸನ್ನಿವೇಶ ಸೃಷ್ಟಿಯಾದರೆ ಅದು ಜನ ಸುರಾಜ್ ಪಕ್ಷಕ್ಕೆ ಅನುಕೂಲಕರ ಪರಿಸ್ಥಿತಿಯಾಗಲಿದೆ" ಎಂದು ಕಿಶೋರ್ ಹೇಳಿದರು.
2025ರ ಬಿಹಾರ ಚುನಾವಣೆಗೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆ ಅವರು ಬಿಜೆಪಿಗೆ ಬಹಿರಂಗವಾಗಿ ಸವಾಲು ಹಾಕಿದರು. ಒಂದೊಮ್ಮೆ ಬಿಜೆಪಿ ಹಾಗೆ ಮಾಡಿದರೆ, 2020ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಗೆ ಸಿಕ್ಕಂಥ ಫಲಿತಾಂಶವೇ ಅದಕ್ಕೂ ಸಿಗಲಿದೆ ಎಂದರು. 2025ರ ಚುನಾವಣೆಯಲ್ಲಿ ಎನ್ಡಿಎ 220 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಿಎಂ ನಿತೀಶ್ ಶನಿವಾರ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದ್ದರು.
ಇತ್ತೀಚೆಗೆ ಕೆಲ ದಿನಗಳಿಂದ ಪ್ರಶಾಂತ್ ಕಿಶೋರ್ ನಿತೀಶ್ ಕುಮಾರ್ ಅವರನ್ನು ಆಗಾಗ ಟೀಕಿಸಿದ್ದಾರೆ. ವಿಶೇಷವಾಗಿ, ತಾವು ಜೆಡಿಯುನಿಂದ ನಿರ್ಗಮಿಸಿದ ನಂತರ ನಿತೀಶ್ ವಿರುದ್ಧ ಅವರ ಹೇಳಿಕೆಗಳು ಹೆಚ್ಚಾಗಿವೆ. ಬಿಹಾರದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ವಿವಿಧ ರಾಜಕೀಯ ಬಣಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿರುವುದಕ್ಕೆ ಇದು ನಿದರ್ಶನ.