ಶ್ರೀನಗರ: ದಶಕಗಳ ಬಳಿಕ ನಡೆದ ಚುನಾವಣೆಯಲ್ಲಿ ಗೆದ್ದು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅವರು ಇಂದು (ಬುಧವಾರ) ಪ್ರಮಾಣವಚನ ಸ್ವೀಕರಿಸಿದರು. ಕಣಿವೆನಾಡಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಾಗಿ ಅವರು ವಾಗ್ದಾನ ಮಾಡಿದರು.
ಗ್ರೀನ್ ಕಾರಿಡಾರ್ ಬಳಸಲ್ಲ: ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಜನರಿಗೆ ಅನುಕೂಲವಾಗುವ ಸರ್ಕಾರವನ್ನು ನೀಡುವೆ. ಪ್ರಯಾಣದ ವೇಳೆ 'ಗ್ರೀನ್ ಕಾರಿಡಾರ್' ಬಳಸುವುದಿಲ್ಲ. ವಿಶೇಷ ಸೌಲಭ್ಯ ನೀಡದಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಪೊಲೀಸರು ಜನರ ಜೊತೆ ಸ್ನೇಹಪರತೆಯಿಂದ ನಡೆದುಕೊಳ್ಳಬೇಕು. ಲಾಠಿ, ಆಕ್ರಮಣವನ್ನು ತಪ್ಪಿಸಬೇಕು. ಜನರಿಗೆ ಅನಾನುಕೂಲವಾಗುವ ಯಾವುದೇ ಪದ್ಧತಿ ಜಾರಿಯಲ್ಲಿ ಇರಬಾರದು ಎಂದು ಅಬ್ದುಲ್ಲಾ ತಿಳಿಸಿದರು.
ನೂತನ ಸಿಎಂಗೆ ಮೆಹಬೂಬಾ ಮುಫ್ತಿ ಸವಾಲು: ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನೂತನ ಮುಖ್ಯಮಂತ್ರಿ ಮೊದಲ ಸವಾಲು ನೀಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿ ರದ್ದಿನ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿದ್ದಾರೆ.
"ಐದು ವರ್ಷಗಳ ನಂತರ ಕಣಿವೆನಾಡು ತನ್ನದೇ ಆದ ಸ್ಥಿರ ಸರ್ಕಾರವನ್ನು ಆಯ್ಕೆ ಮಾಡಿಕೊಂಡಿದೆ. ಮುಂದೆ ಸಾಕಷ್ಟು ಸವಾಲುಗಳಿವೆ. ನೂತನ ಸರ್ಕಾರವು ವಿಧಾನಸಭೆಯಲ್ಲಿ 370ನೇ ವಿಧಿ ರದ್ದತಿಯನ್ನು ಖಂಡಿಸುವ ಮೊದಲ ನಿರ್ಣಯವನ್ನು ಅಂಗೀಕರಿಸುತ್ತದೆ ಎಂದು ಭಾವಿಸುತ್ತೇವೆ. ಇದು ಇಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರದ ನಿರ್ಣಾಯಕ ಮೊದಲ ಹೆಜ್ಜೆ" ಎಂದಿದ್ದಾರೆ.
ಸ್ಥಳೀಯ ಆಡಳಿತದ ಮೇಲೆ ನಂಬಿಕೆ ಬೆಳೆಸಿ: "ಕೇಂದ್ರ ಸರ್ಕಾರದ ಮೂಗಿನ ನೇರಕ್ಕೆ ಲೆಫ್ಟಿನೆಂಟ್ ಗವರ್ನರ್ ಆಡಳಿತದಿಂದ ಜನರು ಕಷ್ಟಗಳನ್ನು ಅನುಭವಿಸಿದ್ದಾರೆ. ಹೊಸ ಸರ್ಕಾರವು ಸ್ಥಳೀಯ ಆಡಳಿತದ ಮೇಲೆ ನಂಬಿಕೆಯನ್ನು ಪುನಃಸ್ಥಾಪಿಸುವ ಅಗತ್ಯವಿದೆ. ಕೇಂದ್ರದ ವಿರುದ್ಧ ಜನರು ಈ ಸರ್ಕಾರವನ್ನು ವಿಶ್ವಾಸ ಮತ್ತು ನಿರೀಕ್ಷೆಯಿಂದ ಆಯ್ಕೆ ಮಾಡಿದ್ದಾರೆ. ಜನರ ನೋವುಗಳಿಗೆ ಸರ್ಕಾರ ಸ್ಪಂದಿಸಬೇಕು" ಎಂದು ಮುಫ್ತಿ ಹೇಳಿದರು.
ಮುಖ್ಯಮಂತ್ರಿಯಾಗಿ ಆಯ್ಕೆಯಾದ ಒಮರ್ ಅಬ್ದುಲ್ಲಾ, ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ, ಕ್ಯಾಬಿನೆಟ್ ಮಂತ್ರಿಗಳಾದ ಸಕಿನಾ ಇಟೂ, ಸತೀಶ್ ಶರ್ಮಾ, ಜವೈದ್ ದಾರ್, ಜಾವೈದ್ ರಾಣಾ ಅವರಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬುಧವಾರ ಪ್ರಮಾಣ ವಚನ ನೀಡಿದರು. ಇಂಡಿಯಾ ಕೂಟದ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಸಿಎಂ ಆಗಿ ಒಮರ್ ಅಬ್ದುಲ್ಲಾ ಪ್ರಮಾಣವಚನ; ಇಂಡಿಯಾ ಒಕ್ಕೂಟದ ನಾಯಕರಿಂದ ಶುಭಾಶಯ