ನವದೆಹಲಿ: ಪ್ರತಿ ದಿನ ಗದ್ದಲ ಎಬ್ಬಿಸುತ್ತಿದ್ದ ರಾಜ್ಯಸಭಾ ಸದಸ್ಯರು ಇಂದು ಸ್ವಲ್ಪ ಹೊತ್ತು ತಮಾಷೆಯಲ್ಲಿ ತೊಡಗಿದರು. ರಾಜ್ಯಸಭೆಯಲ್ಲಿ ನಗೆ ಚಟಾಕಿ ನಡೆಯಿತು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ನಡುವಿನ ಸಂಭಾಷಣೆ ಇದಕ್ಕೆ ಕಾರಣ. ಜಯಾ ಬಚ್ಚನ್ ಅವರು ತಮ್ಮನ್ನು ಪರಿಚಯಿಸಿಕೊಳ್ಳುವಾಗ ಅಮಿತಾಭ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಧನಖರ್ ಜೋರಾಗಿ ನಕ್ಕರು. ಸದನವೂ ನಗೆಗಡಲಲ್ಲಿ ತೇಲಿತು.
ಜಯಾ ಬಚ್ಚನ್ ಅವರು ಅಮಿತಾಭ್ ಹೆಸರನ್ನು ಪ್ರಸ್ತಾಪಿಸಿದ್ದರ ಹಿಂದೆ ಒಂದು ಹಿನ್ನೆಲೆ ಇದೆ. ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ನಾರಾಯಣ ಸಿಂಗ್ ಅವರು ಕಳೆದ ಸೋಮವಾರ ಮಾತನಾಡುವಂತೆ 'ಜಯಾ ಅಮಿತಾಭ್ ಬಚ್ಚನ್' ಅವರನ್ನು ಆಹ್ವಾನಿಸಿದರು. ಇದಕ್ಕೆ ಜಯಾ ಬಚ್ಚನ್ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಜಯಾ ಬಚ್ಚನ್ ಸಾಕು’ ಅಂದಿದ್ದರು. ‘ದಾಖಲೆಗಳಲ್ಲಿ ನಿಮ್ಮ ಪೂರ್ಣ ಹೆಸರೇ ಇದೆ’ ಎಂದಾಗ, ‘ಮಹಿಳೆಯರಿಗೆ ಸ್ವಂತ ಐಡೆಂಟಿಟಿ ಇಲ್ಲವೇ’ ಎಂದು ಅಂದು ಕೊಂಚ ಬೇಸರ ವ್ಯಕ್ತಪಡಿಸಿದ್ದರು.
ಸಭಾಪತಿ ಜಗದೀಪ್ ಧನಖರ್ ಇಂದು ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದರು. ಈ ವೇಳೆ ಮಾತನಾಡಿದ ಜಯಾ ಬಚ್ಚನ್, ಜಯಾ ಅಮಿತಾಭ್ ಬಚ್ಚನ್ ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡರು. ಇದು ಇತರೆ ಸದಸ್ಯರಲ್ಲಿ ನಗು ಹುಟ್ಟಿಸಿತು. ಆದರೆ, ಜಗದೀಪ್ ಧನಖರ್ ಅವರಿಗೆ ನಗು ತಡೆಯಾಗಲಿಲ್ಲ. ನೀವು ಇವತ್ತು ಊಟ ಮಾಡಿಲ್ಲ. ಹಾಗಾಗಿಯೇ ಜೈರಾಮ್ ರಮೇಶ್ ಹೆಸರು ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದೆ. ಅವರ ಹೆಸರು ಹೇಳದಿದ್ದರೆ ಆಹಾರ ಜೀರ್ಣವಾಗುವುದಿಲ್ಲ ಎಂದು ಇದಕ್ಕೆ ಜಯಾಬಚ್ಚನ್ ಲೇವಡಿ ಮಾಡಿದರು.
ಇದಕ್ಕೆ ಜಗದೀಪ್ ಕೂಡ ಅಷ್ಟೇ ತಮಾಷೆಯ ಉತ್ತರ ನೀಡಿದರು. ನಾನು ವಿರಾಮದ ಸಮಯದಲ್ಲಿ ಊಟ ಮಾಡಿರಲಿಲ್ಲ. ಜೈರಾಮ್ ಜೊತೆ ಊಟ ಮಾಡಿದ್ದೆ ಎಂದು ಹೇಳಿ ನಕ್ಕರು. ನಾನು ನಿಮ್ಮ ಮತ್ತು ಅಮಿತಾಭ್ ಅವರ ದೊಡ್ಡ ಅಭಿಮಾನಿ. ಮೊದಲ ಬಾರಿಗೆ ಇದನ್ನು ಹೇಳುವ ಅವಕಾಶ ನನಗೆ ಸಿಕ್ಕಿತು ಎಂದರು. ‘ಏನದು ಫಸ್ಟ್ ಟೈಮ್?’ ಎಂದು ಜಯಾಬಚ್ಚನ್ ಕೇಳಿದಾಗ, ‘ನಿಮ್ಮಂತಹ ಜೋಡಿಯನ್ನು ನಾನು ಹಿಂದೆಂದೂ ಕಂಡಿಲ್ಲ’ ಎಂದು ಜಗದೀಪ್ ಹೇಳಿದರು. ‘ಅದಕ್ಕೆ ನನ್ನ ಹೆಸರು ಹೀಗಾಯ್ತು’ ಎಂದು ಜಯಾಬಚ್ಚನ್ ನಗುತ್ತಾ ಕುಳಿತರು. ಈ ವೇಳೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಜೊತೆಗೆ ಆಪ್ ಸಂಸದ ರಾಘವ್ ಚಡ್ಡಾ ಕೂಡ ಸದನದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ನನ್ನ ಹೆಸರ ಮುಂದೆ ಪತಿ ಅಮಿತಾಭ್ ಹೆಸರೇಕೆ? ಪಾರ್ಲಿಮೆಂಟ್ನಲ್ಲಿ ಜಯಾ ಬಚ್ಚನ್ ಗರಂ - Jaya Bachchan