ನವದೆಹಲಿ: ಹವಾಮಾನ ಬದಲಾವಣೆ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್, ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ದೆಹಲಿಯ ಕರ್ಕರ್ ದೂಮಾ, ಶಾಸ್ತ್ರಿ ಪಾರ್ಕ್ ಮತ್ತು ರೋಹಿಣಿ ಪ್ರದೇಶಗಳಲ್ಲಿ ಮಂಗಳವಾರ ಹೊಸ ನ್ಯಾಯಾಲಯದ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಜೆಐ ಚಂದ್ರಚೂಡ್, ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ಎರಡು ಬಾರಿ ಬೀಸಿದ ಬಿಸಿಗಾಳಿಯ ಅಲೆಗಳು ಹಾಗೂ ನಂತರದಲ್ಲಿ ದಾಖಲೆಯ ಮಳೆಯಾಗಿದ್ದನ್ನು ಉಲ್ಲೇಖಿಸಿದರು.
"ಈ ವರ್ಷ ದೆಹಲಿಯು ದಾಖಲೆಯ ಅತ್ಯಧಿಕ ಬಿಸಿ ಹವಾಮಾನಕ್ಕೆ ಸಾಕ್ಷಿಯಾಗಿದೆ. ನಮ್ಮ ಮೂಲಸೌಕರ್ಯಗಳು ನಮ್ಮ ಜೀವನದ ವಾಸ್ತವಗಳನ್ನು ಪ್ರತಿ ಬಿಂಬಿಸುವಂತಿರಬೇಕು. ಹವಾಮಾನ ಬದಲಾವಣೆ ಸಮಸ್ಯೆಯನ್ನು ಇನ್ನು ನಿರ್ಲಕ್ಷಿಸುವಂತಿಲ್ಲ. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವುದು ಸೇರಿದಂತೆ ನಮ್ಮ ದೈನಂದಿನ ಜೀವನದಲ್ಲಿ ಹಸಿರು ಜೀವನಶೈಲಿ ಅಳವಡಿಸಿಕೊಳ್ಳುವುದು ಒಂದು ನಿರ್ಣಾಯಕ ಹೆಜ್ಜೆಯಾಗಿದೆ" ಎಂದು ಅವರು ನುಡಿದರು.
ಹೊಸದಾಗಿ ಉದ್ಘಾಟನೆಯಾಗುತ್ತಿರುವ ನ್ಯಾಯಾಲಯ ಕಟ್ಟಡಗಳು ಜಿಆರ್ಐಎಚ್ಎ-ರೇಟೆಡ್ ಆಗಿದ್ದು, ಶಾಖವನ್ನು ಕಡಿಮೆ ಮಾಡುತ್ತವೆ ಮತ್ತು ಪರಿಸರಕ್ಕೆ ಕಡಿಮೆ ಹಾನಿ ಮಾಡುತ್ತವೆ ಎಂಬುದು ಸಂತೋಷದ ವಿಷಯವಾಗಿದೆ ಎಂದು ಸಿಜೆಐ ಹೇಳಿದರು. ಗ್ರೀನ್ ರೇಟೆಡ್ ಇಂಟಿಗ್ರೇಟೆಡ್ ಹ್ಯಾಬಿಟಾಟ್ ಅಸೆಸ್ಮೆಂಟ್ (ಜಿಆರ್ಐಎಚ್ಎ) ಇದು ಕೆಲ ರಾಷ್ಟ್ರೀಯವಾಗಿ ಸ್ವೀಕಾರಾರ್ಹ ಪರಿಸರ ಮಾನದಂಡಗಳನ್ನು ಆಧರಿಸಿ ತಮ್ಮ ಕಟ್ಟಡದ ಕಾರ್ಯಕ್ಷಮತೆ ನಿರ್ಣಯಿಸಲು ಜನರಿಗೆ ಸಹಾಯ ಮಾಡುವ ರೇಟಿಂಗ್ ಸಾಧನವಾಗಿದೆ.
"ನ್ಯಾಯಾಲಯ ಎಂದರೆ ಅದು ಇತರ ಎಲ್ಲ ಕಟ್ಟಡಗಳಂತೆ ಕೇವಲ ಇಟ್ಟಿಗೆ ಮತ್ತು ಕಾಂಕ್ರೀಟ್ನ ಕಟ್ಟಡವಲ್ಲ. ಅವು ಭರವಸೆಯ ಸೌಧನಗಳೂ ಹೌದು. ನ್ಯಾಯ ಮತ್ತು ಕಾನೂನಿನ ನಿಯಮಗಳನ್ನು ಪಾಲನೆ ಮಾಡಿಸುವುದಕ್ಕಾಗಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ನಮ್ಮ ಮುಂದೆ ದಾಖಲಾಗುತ್ತಿರುವ ಪ್ರತಿಯೊಂದು ಪ್ರಕರಣವೂ ನ್ಯಾಯದ ಭರವಸೆಯಿಂದ ಬಂದಿರುತ್ತದೆ. ನಮ್ಮ ನ್ಯಾಯಾಧೀಶರು, ವಕೀಲರು ಮತ್ತು ಕಕ್ಷಿದಾರರ ಸುರಕ್ಷತೆ ಮತ್ತು ಸೌಕರ್ಯದಲ್ಲಿ ನಾವು ಹೂಡಿಕೆ ಮಾಡಿದಾಗ, ನಾವು ಕೇವಲ ಪರಿಣಾಮಕಾರಿ ವ್ಯವಸ್ಥೆ ಮಾತ್ರವಲ್ಲದೇ ಅದಕ್ಕೂ ಹೆಚ್ಚಿನದನ್ನು ಅಂದರೆ, ನ್ಯಾಯಯುತ ಮತ್ತು ಅಂತರ್ಗತ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ." ಎಂದು ಅವರು ತಿಳಿಸಿದರು.
ಹೊಸ ನ್ಯಾಯಾಲಯ ಸಂಕೀರ್ಣಗಳು ನ್ಯಾಯಾಲಯದ ದಕ್ಷತೆಯನ್ನು ಹೆಚ್ಚಿಸುತ್ತವೆ, ಪ್ರಕರಣಗಳ ಬ್ಯಾಕ್ ಲಾಗ್ಗಳನ್ನು ಕಡಿಮೆ ಮಾಡುತ್ತವೆ ಮತ್ತು ಸಂಬಂಧಿಸಿದ ಎಲ್ಲರಿಗೂ ಗೌರವಯುತ ವಾತಾವರಣ ನೀಡಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.