ನವದೆಹಲಿ: ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ಮಾರ್ಚ್ 31 ರಿಂದ ನೇರ ವಿಮಾನ ಹಾರಾಟ ಆರಂಭಗೊಳ್ಳಲಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಸೋಮವಾರ ಪ್ರಕಟಣೆ ಹೊರಡಿಸಿರುವ ಇಂಡಿಗೋ ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ಮಾ.31 ರಿಂದ ವಿಮಾನ ಸೇವೆಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದೆ. ಅಗತ್ತಿ ಇಂಡಿಗೋ ನೆಟ್‌ವರ್ಕ್‌ನ 88ನೇ ದೇಶಿಯ ಮತ್ತು 121ನೇ ಒಟ್ಟಾರೆ ತಾಣವಾಗಿದೆ. ಇಂಡಿಗೋ ಸಂಸ್ಥೆಯು 78 ಆಸನಗಳನ್ನು ಹೊಂದಿರುವ ATR ವಿಮಾನವನ್ನು ಈ ಮಾರ್ಗಕ್ಕೆ ಬಳಸಲಿದೆ.
ಬೆಂಗಳೂರಿನಿಂದ ಲಕ್ಷದ್ವೀಪದ ಅಗತ್ತಿ ದ್ವೀಪಕ್ಕೆ ನೇರ ವಿಮಾನಗಳ ಬುಕಿಂಗ್ ಇಂಡಿಗೋ ಏರ್‌ಲೈನ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದಕ್ಕಾಗಿ, ಪ್ರವಾಸಿಗರು ಇಲ್ಲಿರುವ ಲಿಂಕ್ ಮೇಲೆ www.goindigo.in ಕ್ಲಿಕ್ ಮಾಡಿ ನಿಮ್ಮ ಟಿಕೆಟ್ ಅನ್ನು ಮುಂಗಡ ಬುಕ್ ಮಾಡಿಕೊಳ್ಳಬಹುದಾಗಿದೆ. ಬೆಂಗಳೂರಿನಿಂದ ವಿಮಾನದ ಮೂಲಕ ಅಗತ್ತಿ ದ್ವೀಪವನ್ನು ತಲುಪಲು 2 ಗಂಟೆ 35 ನಿಮಿಷ ತೆಗೆದುಕೊಳ್ಳುತ್ತದೆ. ಇದು ತಡೆರಹಿತ ಫ್ಲೈಟ್ ಆಗಿದ್ದು, ಇದರ ಟಿಕೆಟ್ ದರ ₹6,999 ರಿಂದ ಪ್ರಾರಂಭವಾಗಲಿದೆ.
ಆಳ ಸಮುದ್ರದ ಮೀನುಗಾರಿಕೆ, ಸ್ಕೂಬಾ ಡೈವಿಂಗ್ ಸೇರಿದಂತೆ ಇಲ್ಲಿಯ ಹಲವು ವಿಶೇಷತೆಗಳನ್ನು ಕಣ್ತುಂಬಿಕೊಳ್ಳಲು ಮತ್ತು ಆಸ್ವಾದಿಸಲು ಅಗತ್ತಿಯೂ ಸುಂದರ ತಾಣವಾಗಿದೆ ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ, ಅಲಯನ್ಸ್ ಏರ್ ಮಾತ್ರ ಅಗತ್ತಿಗೆ ಸೇವೆಗಳನ್ನು ಒದೆಗಿಸುತ್ತಿದೆ. ಪ್ರಾದೇಶಿಕ ವಾಹಕ FLY91 ಏಪ್ರಿಲ್‌ನಲ್ಲಿ ಸೇವೆಗಳನ್ನು ಪ್ರಾರಂಭಿಸಲಿದೆ.