ಹಿಸಾರ್ (ಹರಿಯಾಣ) : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ಪಕ್ಷಾಂತರ ಚಟುವಟಿಕೆಗಳು ಹೆಚ್ಚಾಗಿವೆ. ಹರಿಯಾಣದ ಮಾಜಿ ಸಚಿವೆ ಮತ್ತು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾದ ಸಾವಿತ್ರಿ ಜಿಂದಾಲ್ ಅವರು ಕಾಂಗ್ರೆಸ್ ತೊರೆದು ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇತ್ತೇಚೆಗಷ್ಟೇ ಅಂದರೆ ಮಾರ್ಚ್ 24ರಂದು ಸಾವಿತ್ರಿ ಅವರ ಮಗ ನವೀನ್ ಜಿಂದಾಲ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದರು.
ಹಿಸಾರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಸಾವಿತ್ರಿ ಜಿಂದಾಲ್ ಬಿಜೆಪಿಗೆ ಸೇರ್ಪಡೆಗೊಂಡರು. ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿ ನವೀನ್ ಜಿಂದಾಲ್ ಅವರನ್ನು ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಸಾವಿತ್ರಿ ಜಿಂದಾಲ್ ಅವರು ಕಾಂಗ್ರೆಸ್ ತೊರೆದಿರುವ ಬಗ್ಗೆ ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. “ನಾನು ಶಾಸಕಿಯಾಗಿ 10 ವರ್ಷಗಳ ಕಾಲ ಹಿಸಾರ್ ಜನರನ್ನು ಪ್ರತಿನಿಧಿಸಿದ್ದೇನೆ ಮತ್ತು ಸಚಿವೆಯಾಗಿ ಹರಿಯಾಣ ರಾಜ್ಯಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಹಿಸಾರ್‌ನ ಜನರು ಮತ್ತು ನನ್ನ ಕುಟುಂಬದ ಸಲಹೆಯ ಮೇರೆಗೆ ನಾನು ಇಂದು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.
ಸಾವಿತ್ರಿ ಜಿಂದಾಲ್ ಅವರನ್ನು ಈ ವರ್ಷ ಫೋರ್ಬ್ಸ್ ಇಂಡಿಯಾ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂದು ಪಟ್ಟಿ ಮಾಡಿದೆ. ಫೋರ್ಬ್ಸ್ ಇಂಡಿಯಾದ 10 ಶ್ರೀಮಂತ ಮಹಿಳೆಯರ ಪಟ್ಟಿಯ ಪ್ರಕಾರ, ದಿವಂಗತ ಕೈಗಾರಿಕೋದ್ಯಮಿ ಮತ್ತು ಮಾಜಿ ಸಚಿವ ಓ.ಪಿ ಜಿಂದಾಲ್ ಅವರ ಪತ್ನಿ ಸಾವಿತ್ರಿ ಜಿಂದಾಲ್ ಅವರ ನಿವ್ವಳ ಮೌಲ್ಯ 29.6 ಬಿಲಿಯನ್ ಯುಎಸ್‌ಡಿ ರಷ್ಟಿದೆ ಎಂದು ಬಹಿರಂಗಗೊಂಡಿದೆ.
ಹರಿಯಾಣದಲ್ಲಿ ಹಿಂದಿನ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಾವಿತ್ರಿ ಜಿಂದಾಲ್ ಅವರು ಸಚಿವೆಯಾಗಿದ್ದರು. 2014ರಲ್ಲಿ ಅವರು ಹಿಸಾರ್‌ನಿಂದ ಬಿಜೆಪಿಯ ಡಾ.ಕಮಲ್ ಗುಪ್ತಾ ವಿರುದ್ಧ ಸೋತಿದ್ದರು. ಗುಪ್ತಾ ಪ್ರಸ್ತುತ ನಯಾಬ್ ಸಿಂಗ್ ಸೈನಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಇದನ್ನೂ ಓದಿ : ಅಮರಾವತಿಯ ಪಕ್ಷೇತರ ಸಂಸದೆ ನಟಿ ನವನೀತ್ ಕೌರ್ ರಾಣಾ ಬಿಜೆಪಿಗೆ ಸೇರ್ಪಡೆ - Lok Sabha Election 2024