ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಜರ್ಮನಿಯ ವಿದೇಶಾಂಗ ಸಚಿವಾಲಯದ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಆಂತರಿಕ ವ್ಯವಹಾರಗಳ ಕುರಿತು ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿ, ಜರ್ಮನಿ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥ ಜಾರ್ಜ್ ಎಂಜ್‌ವೀಲರ್ ಅವರನ್ನು ಕರೆಸಿದೆ. ರಾಯಭಾರಿ ಜಾರ್ಜ್ ಎಂಜ್ವೀಲರ್ ಶನಿವಾರ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.
ಮೂಲಗಳ ಪ್ರಕಾರ, ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜರ್ಮನ್ ರಾಯಭಾರಿಯ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, ''ನಮ್ಮ ಆಂತರಿಕ ವಿಷಯಗಳ ಬಗ್ಗೆ ಜರ್ಮನಿಯ ವಿದೇಶಾಂಗ ಸಚಿವಾಲಯ ಮಾಡಿದ ಕಾಮೆಂಟ್‌ಗಳಿಗೆ ಭಾರತದ ತೀವ್ರ ವಿರೋಧ ತಿಳಿಸಲು ನಾವು ನವದೆಹಲಿಯಲ್ಲಿರುವ ಜರ್ಮನ್ ಮಿಷನ್‌ನ ಉಪ ಮುಖ್ಯಸ್ಥರನ್ನು ಕರೆಸಿದ್ದೇವೆ. ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಹಾಳುಮಾಡುವ ಕಾಮೆಂಟ್‌ಗಳನ್ನು ಮಾಡುವುದು ಸರಿಯಲ್ಲ. ಭಾರತವು ಬಲವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಭಾರತ ಮತ್ತು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಕಾನೂನು ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ರೀತಿ ಈ ಪ್ರಕರಣದಲ್ಲೂ ಕಾನೂನು ತನ್ನ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಪ್ರಕರಣದಲ್ಲಿ ಪಕ್ಷಪಾತದ ಊಹೆಗಳನ್ನು ಮಾಡುವುದು ಸರಿಯಲ್ಲ" ಎಂದು ಹೇಳಿದ್ದಾರೆ.
ಜರ್ಮನಿ ವಿದೇಶಾಂಗ ಕಚೇರಿ ಹೇಳಿದ್ದೇನೆ: ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ತಡರಾತ್ರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಕೇಜ್ರಿವಾಲ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಜರ್ಮನಿಯ ವಿದೇಶಾಂಗ ಸಚಿವಾಲಯ, ''ನಾವು ಈ ಬೆಳವಣಿಗೆಯನ್ನು ಗಮನಿಸಿದ್ದೇವೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳಿಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಈ ಪ್ರಕರಣದಲ್ಲಿಯೂ ಅನ್ವಯಿಸಲಾಗುತ್ತದೆ ಎಂದು ಭಾವಿಸುತ್ತೇವೆ. ನ್ಯಾಯಯುತ ವಿಚಾರಣೆಗೆ ಕೇಜ್ರಿವಾಲ್ ಅವರಿಗೆ ಎಲ್ಲಾ ರೀತಿಯ ಹಕ್ಕಿದೆ. ಆರೋಪ ಎದುರಿಸುತ್ತಿರುವ ಇತರ ವ್ಯಕ್ತಿಗಳಂತೆ, ಕೇಜ್ರಿವಾಲ್ ಅವರು ನ್ಯಾಯಯುತ ವಿಚಾರಣೆಗೆ ಅರ್ಹರು. ಅವರು ಯಾವುದೇ ನಿರ್ಬಂಧವಿಲ್ಲದೇ ಎಲ್ಲಾ ಕಾನೂನು ಮಾರ್ಗಗಳನ್ನು ಅನುಸರಿಸುವ ಹಕ್ಕು ಹೊಂದಿದ್ದಾರೆ. ಕಾನೂನಿನ ನಿಯಮದ ಪ್ರಮುಖ ಅಂಶಗಳನ್ನು ಈ ಸಂದರ್ಭದಲ್ಲಿಯೂ ಅನ್ವಯಿಸಬೇಕು'' ಎಂದು ಹೇಳಿತ್ತು.
ಕೇಜ್ರಿವಾಲ್‌ಗೆ ಮಾ.28ರವರೆಗೆ ಇ.ಡಿ ಬಂಧನ: ರೋಸ್ ಅವೆನ್ಯೂ ಕೋರ್ಟ್ ಅರವಿಂದ್ ಕೇಜ್ರಿವಾಲ್‌ರನ್ನು ಮಾ.28 ರವರೆಗೆ ಇ.ಡಿ ಕಸ್ಟಡಿಗೆ ನೀಡಿದೆ. ಇಡಿ ಹತ್ತು ದಿನಗಳವರೆಗೆ ಕಸ್ಟಡಿಗೆ ನೀಡುವಂತೆ ಕೋರಿತ್ತು. ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಪ್ರಕ್ರಿಯಿಸಿ, ನಾನು ರಾಜೀನಾಮೆ ನೀಡುವುದಿಲ್ಲ. ಆರೋಗ್ಯವಾಗಿದ್ದೇನೆ. ಜೈಲಿನಿಂದಲೇ ಸರ್ಕಾರ ನಡೆಸುತ್ತೇನೆ ಎಂದಿದ್ದರು.
ಇದನ್ನೂ ಓದಿ: ಇಡಿ ಕಸ್ಟಡಿಯಿಂದಲೇ ಪತ್ರ ಬರೆದ ಕೇಜ್ರಿವಾಲ್: ಈ ಸಂದೇಶ ಜನರಿಗೆ ಮುಟ್ಟಿಸಿದ ಪತ್ನಿ ಸುನಿತಾ - Sunita kejriwal Press meet