ನವದೆಹಲಿ: ದೆಹಲಿ ವಿಧಾನಸಭಾ ಅಧಿವೇಶನ ಮುಂದುವರೆದಿದೆ. ಮಾರ್ಚ್ 4 ರಂದು ಹಣಕಾಸು ಸಚಿವ ಅತಿಶಿ ಅವರು ಮಂಡಿಸಿದ ದೆಹಲಿ ಬಜೆಟ್ ಬಗ್ಗೆ ಸತತ ಮೂರು ದಿನಗಳ ಚರ್ಚೆ ನಡೆಯಿತು. ಬಜೆಟ್ ಭಾಷಣದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿದರು. ಅವರ ಉತ್ತರದ ಬಳಿಕ ಬಜೆಟ್ಗೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆಯಲಾಯಿತು.
ಬಜೆಟ್ ಮೇಲಿನ ಚರ್ಚೆಯ ಕೊನೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ದೇಶದ ಮುಂದೆ ಅಭಿವೃದ್ಧಿಯ ಮಾದರಿ, ವಿನಾಶದ ಮಾದರಿ ಎಂಬ ಎರಡು ಮಾದರಿಗಳಿವೆ ಎಂದು ಪ್ರತಿಪಾದಿಸಿದರು. ಎರಡೂ ಮಾದರಿಗಳು ಈಗ ಚುನಾವಣೆಯಲ್ಲಿ ಗೆಲ್ಲುತ್ತಿವೆ. ಈಗ ದೇಶದ ಜನರು ಅವರಿಗೆ ಅಭಿವೃದ್ಧಿ ಬೇಕೋ ಅಥವಾ ದೇಶದ ವಿನಾಶ ಬೇಕೋ ಎಂದು ನಿರ್ಧರಿಸಬೇಕು. ಈ ಯುಗದಲ್ಲಿ ಶ್ರೀರಾಮ ಇದ್ದಿದ್ದರೂ ಕೂಡಾ ಬಿಜೆಪಿಯವರು ಇಡಿ- ಐಟಿ ಮತ್ತು ಸಿಬಿಐ ಅನ್ನು ಅವರ ಮನೆಗೆ ಕಳುಹಿಸುತ್ತಿದ್ದರು ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್, ಇದುವರೆಗೂ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಮನೀಶ್ ಸಿಸೋಡಿಯಾ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರು ಮುಂದಿನ ವರ್ಷ ದೆಹಲಿಯ ಬಜೆಟ್ ಮಂಡಿಸುತ್ತಾರೆ ಎಂದು ನಾವು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕೇಜ್ರಿವಾಲ್ ವಿಧಾನಸಭೆಯಲ್ಲಿ ತಮ್ಮ ಸರ್ಕಾರ ರಚನೆಯಿಂದ ಇಲ್ಲಿಯವರೆಗೆ ನಡೆದ ಎಲ್ಲ ವಿದ್ಯಮಾನಗಳನ್ನು ವಿವರಿಸಿದರು.
ಬಿಜೆಪಿ ವಿನಾಶದ ಮಾದರಿಯಲ್ಲಿ ಎಲ್ಲ ಪಕ್ಷಗಳನ್ನು ತುಳಿದು, ತೊಲಗಿಸಿ, ಖರೀದಿಸಿ, ಬಂಧಿಸಿ ಸರ್ಕಾರ ನಡೆಸುತ್ತಿದೆ ಎಂದು ಸಿಎಂ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಂತ ಅಮಾನವೀಯ ರೀತಿಯಲ್ಲಿ ವಿರೋಧಿಗಳನ್ನು ಜೈಲಿಗೆ ಕಳುಹಿಸಿ, ಇಡಿ ನೇಮಿಸಿ, ಸಿಬಿಐ ಬಿಟ್ಟು ಸರ್ಕಾರಗಳನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದ ದೆಹಲಿ ಸಿಎಂ, ಗುಜರಾತ್‌ನ ಬಿಜೆಪಿ ಸರ್ಕಾರ 30 ವರ್ಷಗಳಿಂದ ಒಂದೇ ಒಂದು ಶಾಲೆಯನ್ನು ದುರಸ್ತಿ ಮಾಡಿಲ್ಲ. ಅಂದು ಒಂದಷ್ಟು ಕೆಲಸ ಮಾಡಿದ್ದರೆ ಇಂದು ಇಡಿ, ಸಿಬಿಐ, ಆದಾಯ ತೆರಿಗೆ ಬೇಕಿರಲಿಲ್ಲ ಎಂದು ಮೋದಿಗೆ ಟಾಂಗ್ ಕೊಟ್ಟರು.
ಉತ್ತರಾಖಂಡ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳನ್ನು ಸಂವಿಧಾನ ಬಾಹಿರವಾಗಿ ಉರುಳಿಸಲಾಯಿತು, ಎಲ್ಲಿ ಒಳ್ಳೆಯ ಸರಕಾರಗಳು ನಡೆಯುತ್ತಿವೆಯೋ ಅಲ್ಲಿಯ ಸರಕಾರಗಳನ್ನು ಇಡಿ, ಸಿಬಿಐ ಬಳಸಿ ಪತನಗೊಳಿಸಲಾಯಿತು. ಹಿಟ್ಲರ್ ಕೂಡ ಹಾಗೆಯೇ ಮಾಡಿದ. ಹಿಟ್ಲರ್ ಮೂರು ತಿಂಗಳು ತೆಗೆದುಕೊಂಡರೆ, ಬಿಜೆಪಿ 10 ವರ್ಷ ತೆಗೆದುಕೊಂಡಿದೆ. ಈ ಯುಗದಲ್ಲಿ ಶ್ರೀರಾಮ ಏನಾದರೂ ಬದುಕಿದ್ದರೆ ಇಡಿ ಮತ್ತು ಸಿಬಿಐ ಅವರನ್ನು ಅವರ ಮನೆಗೆ ಕಳುಹಿಸಿ ಅಲ್ಲಿ ಬಂದೂಕು ಇಟ್ಟುಕೊಂಡು ಅವರ ಮಗ ಬಿಜೆಪಿ ಸೇರುತ್ತಿದ್ದಾನೆಯೇ ಅಥವಾ ಜೈಲಿಗೆ ಹೋಗುತ್ತೀರಾ ಎಂದು ಕೇಳುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಇದನ್ನು ಓದಿ: ಬಿಜೆಪಿ ಜೊತೆ ಟಿಡಿಪಿ, ಜನಸೇನಾ ಮೈತ್ರಿ ಫೈನಲ್: ಲೋಕಸಭೆ, ವಿಧಾನಸಭಾ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧೆ