ನವದೆಹಲಿ : ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಜಯ್ ನಾಯರ್ ಅವರು, ಕೇಜ್ರಿವಾಲ್ ಅವರನ್ನು ಹತ್ತು ದಿನಗಳವರೆಗೆ ಕಸ್ಟಡಿಗೆ ಕೇಳಿದರು. ಈ ವೇಳೆ, ಕೇಜ್ರಿವಾಲ್ ಪರ ವಕೀಲರು ವಿರೋಧಿಸಿದರು. ಬಳಿಕ ಎರಡು ಕಡೆಯ ವಾದ - ಪ್ರತಿವಾದ ಆಲಿಸಿದ ಪೀಠ ಮಾರ್ಚ್ 28ರ ವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದರೂ ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ ಎಂದು ಪಕ್ಷದ ಉನ್ನತ ನಾಯಕರು ಮತ್ತು ಸಚಿವರು ಹೇಳಿದ್ದಾರೆ. ಗುರುವಾರ ರಾತ್ರಿ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದ ನಂತರವೂ ಎಎಪಿ ನಾಯಕರು ಮತ್ತು ಅತಿಶಿಯಿಂದ ಸೌರಭ್ ಭಾರದ್ವಾಜ್ ವರೆಗಿನ ಸಚಿವರು ಸಿಎಂ ಸರ್ಕಾರವನ್ನು ಜೈಲಿನಿಂದಲೇ ನಡೆಸುತ್ತಾರೆ ಎಂದು ಪುನರುಚ್ಚರಿಸಿದ್ದಾರೆ. ಆದರೆ, ಸರ್ಕಾರ ಹೇಗೆ ಆಡಳಿತ ನಡೆಸಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಥವಾ ಎಎಪಿ ನಾಯಕ ಅತಿಶಿ, ಸೌರಭ್, ಗೋಪಾಲ್ ರೈ ಅಥವಾ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ಗೆ ಅಧಿಕಾರವನ್ನು ಹಸ್ತಾಂತರಿಸಲಾಗುತ್ತದೆಯೇ? ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಪ್ರಾರಂಭವಾಗಿವೆ.
ಬಂಧನದ ನಂತರ ಸಿಎಂ ಪತ್ನಿ ಸುನಿತಾ ಕೇಜ್ರಿವಾಲ್ ಟ್ವೀಟ್ : ಕೇಜ್ರಿವಾಲ್ ಅವರ ಬಂಧನದ ನಂತರ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಶುಕ್ರವಾರ ಸಂಜೆ ಎಕ್ಸ್ನಲ್ಲಿ ಬರೆದುಕೊಂಡಿದ್ದು, "ಮೋದಿಜಿ ತಮ್ಮ ಅಧಿಕಾರದ ದುರಹಂಕಾರದಿಂದ ಮೂರು ಬಾರಿ ಆಯ್ಕೆಯಾದ ಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ. ಅವರು ಎಲ್ಲರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದು ದೆಹಲಿಯ ಜನರಿಗೆ ಮಾಡಿದ ದ್ರೋಹ. ನಿಮ್ಮ ಮುಖ್ಯಮಂತ್ರಿ ಯಾವಾಗಲೂ ಜೊತೆಯಲ್ಲಿ ನಿಲ್ಲುತ್ತಾರೆ. ಅವರ ಜೀವನ ದೇಶಕ್ಕೆ ಮುಡಿಪಾಗಿದೆ. ಸಾರ್ವಜನಿಕರಿಗೆ ಎಲ್ಲವೂ ಗೊತ್ತು'' ಎಂದು ಬರೆದುಕೊಂಡಿದ್ದಾರೆ.
ಅಪರಾಧ ಸಾಬೀತಾಗುವವರೆಗೆ ಸಿಎಂ ಹುದ್ದೆಯಲ್ಲಿ ಮುಂದುವರಿಯಬಹುದು: ಸಾಂವಿಧಾನಿಕ ತಜ್ಞ ಎಸ್. ಕೆ ಶರ್ಮಾ ಅವರ ಪ್ರಕಾರ, ಮುಖ್ಯಮಂತ್ರಿ ಅವರು ತಪ್ಪಿತಸ್ಥರು ಎಂದು ಸಾಬೀತಾಗುವವರೆಗೆ ಮತ್ತು ಶಿಕ್ಷೆಯಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯಬಹುದು. ಆದರೆ ಪ್ರಾಯೋಗಿಕವಾಗಿ ನೋಡಿದರೆ ಜೈಲಿನಿಂದ ಸರ್ಕಾರ ನಡೆಸುವುದು ಮತ್ತು ಸರ್ಕಾರಿ ಕೆಲಸ ನಡೆಸುವುದು ಸುಲಭವಲ್ಲ. ಸರ್ಕಾರದ ಯೋಜನೆಗಳು ಮತ್ತು ನಿರ್ಧಾರಗಳಿಗೆ ಸಂಬಂಧಿಸಿದಂತೆ ಮೊದಲು ನ್ಯಾಯಾಲಯದಿಂದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ನಂತರ ಅದನ್ನು ಮುಖ್ಯಮಂತ್ರಿಯವರ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. ಹೀಗಿರುವಾಗ ಎಎಪಿಯಲ್ಲಿ ನಾಯಕತ್ವದ ಬಿಕ್ಕಟ್ಟು ತಲೆದೋರಿದೆಯೇ? ಎಂಬ ಚರ್ಚೆ ಶುರುವಾಗಿದೆ. ಏಕೆಂದರೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರು ಜೈಲಿನಲ್ಲಿದ್ದಾರೆ ಮತ್ತು ಅರವಿಂದ್ ಕೇಜ್ರಿವಾಲ್ ಈಗಾಗಲೇ ತಮ್ಮ ಹಳೆಯ ಸ್ನೇಹಿತರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಎಂಬ ಚರ್ಚೆಯೂ ಇದೆ.
ಕೇಜ್ರಿವಾಲ್ ಅವರ ಕೆಲಸದ ಕಾರಣಕ್ಕಾಗಿ ಬಂಧಿಸಲಾಯಿತು - ಅಣ್ಣಾ ಹಜಾರೆ : ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಆರಂಭಿಸಿದ್ದರು. ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಸಂಬಂಧಿಸಿದಂತೆ ಅಣ್ಣಾ ಹಜಾರೆ ಮಾಡಿರುವ ಕಾಮೆಂಟ್ ಕೂಡ ವಿಶೇಷವಾಗಿದೆ. ನನ್ನೊಂದಿಗೆ ಕೆಲಸ ಮಾಡಿ ಮದ್ಯದ ವಿರುದ್ಧ ಧ್ವನಿ ಎತ್ತಿದ ಅರವಿಂದ್ ಕೇಜ್ರಿವಾಲ್ ಇಂದು ಮದ್ಯದ ನೀತಿ ಮಾಡುತ್ತಿದ್ದಾರೆ. ಈ ಬಗ್ಗೆ ನನಗೆ ಬೇಸರವಾಗಿದೆ. ಅವರ ಕೆಲಸದಿಂದಾಗಿ ಅವರ ಬಂಧನವಾಗಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಅದೇ ಸಮಯದಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ 'ಭ್ರಷ್ಟಾಚಾರದ ವಿರುದ್ಧ ಭಾರತ ಚಳವಳಿ'ಯಲ್ಲಿ ಭಾಗವಹಿಸಿದ್ದ ಅರವಿಂದ್ ಕೇಜ್ರಿವಾಲ್ ಅವರ ಹಳೆಯ ಸಹವರ್ತಿ, ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜನರು ಅಧಿಕಾರಕ್ಕೆ ಬಂದರೆ ದುರಾಸೆಯೇ ಪ್ರಬಲವಾಗುವುದು ಈ ಘಟನೆಯಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದ್ದಾರೆ.
ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನ: ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸಲು ರೂಪಿಸಿರುವ ಯೋಜನೆ ಈಗ ಹೇಗೆ ನಡೆಯಲಿದೆ? ಆದಾಗ್ಯೂ, ಅರವಿಂದ್ ಕೇಜ್ರಿವಾಲ್ ಬಂಧನದ ನಂತರ, ಕೆಲವು ಶಾಸಕರು ಮತ್ತು ಕಾರ್ಯಕರ್ತರು ಗುರುವಾರ ರಾತ್ರಿ ಅವರ ಮನೆ ಎದುರು ಭಾರಿ ಪ್ರತಿಭಟನೆ ನಡೆಸಿದರು. ಆದರೆ ಬಹುತೇಕ ಶಾಸಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಶುಕ್ರವಾರ, ಇಡಿ ಕೇಜ್ರಿವಾಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಅನೇಕ ಆಮ್ ಆದ್ಮಿ ಪಕ್ಷದ ಶಾಸಕರು ಮತ್ತು ಕೌನ್ಸಿಲರ್‌ಗಳು ಮುಖ್ಯಮಂತ್ರಿಯ ನಿವಾಸಕ್ಕೆ ತೆರಳಿ ಅವರ ಕುಟುಂಬವನ್ನು ಭೇಟಿ ಮಾಡಿ ಜೊತೆಯಲ್ಲಿ ನಿಲ್ಲುವ ಭರವಸೆ ನೀಡಿದರು.
ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರು ಮದ್ಯದ ಹಗರಣದಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ ಮತ್ತು ಅದಕ್ಕೂ ಮೊದಲು, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ. ಈ ದೊಡ್ಡ ನಾಯಕರ ಬಂಧನದ ನಂತರ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ವರ್ಚಸ್ಸು ಹೆಚ್ಚಾಗಿದೆ. ಕೇಜ್ರಿವಾಲ್ ಈ ಇಬ್ಬರೂ ಎಎಪಿ ನಾಯಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಹಾಗಾದರೆ ಅವರು ಇನ್ನೂ ಸ್ವಲ್ಪ ಜವಾಬ್ದಾರಿಯನ್ನು ಪಡೆಯಬಹುದೇ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಮ್ ಆದ್ಮಿ ಪಕ್ಷವು "ಮೈನ್ ಭಿ ಕೇಜ್ರಿವಾಲ್" ಎಂಬ ಸಹಿ ಅಭಿಯಾನ ನಡೆಸಿತ್ತು. ಇದರಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಬಂಧಿಸಿದರೆ ಜೈಲಿಗೆ ಹೋಗಬೇಕು ಎಂದು ಜನರು ಭಾವಿಸುತ್ತೀರಾ? ಎಂದು ಕೇಳಲಾಯಿತು. ಈ ಅಭಿಯಾನದ ಬಗ್ಗೆ ಪಕ್ಷದ ಸಂಸದ ಸಂದೀಪ್ ಪಾಠಕ್ ಹೇಳುವಂತೆ, ಕೇಜ್ರಿವಾಲ್ ಚುನಾಯಿತ ಮುಖ್ಯಮಂತ್ರಿ ಎಂಬುದು 90 ಜನರ ಅಭಿಪ್ರಾಯವಾಗಿತ್ತು. ಜೈಲಿನಲ್ಲಿ ಇರಲಿ, ಎಲ್ಲೇ ಇರಲಿ ಮುಖ್ಯಮಂತ್ರಿಗಳು ಹಾಗೆಯೇ ಇರುತ್ತಾರೆ. ಈಗ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಹಾಗಾದರೆ ದೆಹಲಿಯನ್ನು ಯಾರು ಆಳುತ್ತಾರೆ? ಮತ್ತು ಜೈಲಿನಿಂದಲೇ ದೆಹಲಿಯನ್ನು ಆಳಲು ಸಾಧ್ಯವೇ? ಇದು ಸಹ ಗಂಭೀರವಾಗಿ ಯೋಚಿಸಬೇಕಾದ ವಿಷಯವೇ ಆಗಿದೆ.
ಇದನ್ನೂ ಓದಿ: ಕೇಜ್ರಿವಾಲ್ ಸಿಎಂ ಆಗಿ ಮುಂದುವರೆಯಬಹುದೇ?; ಜೈಲಿನಿಂದ ಆಡಳಿತ ಕಾರ್ಯಸಾಧ್ಯವೇ?; ತಜ್ಞರ ಅಭಿಪ್ರಾಯ ಹೀಗಿದೆ - Kejriwal Arrest