ಹೈದರಾಬಾದ್: ಗ್ರೇಟರ್ ಹೈದರಾಬಾದ್ನ ಉಪ ಮೇಯರ್ ಎಂ. ಶ್ರೀಲತಾ ಮತ್ತು ಅವರ ಪತಿ ಬಿಆರ್ಎಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಶೋಭನ್ ರೆಡ್ಡಿ ಅವರು ಭಾನುವಾರ ಬಿಆರ್ಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ರಾಜ್ಯ ಪ್ರಧಾನ ಕಚೇರಿ ಗಾಂಧಿ ಭವನದಲ್ಲಿ ದಂಪತಿಗಳು ಔಪಚಾರಿಕವಾಗಿ ಕಾಂಗ್ರೆಸ್ ಸೇರಿದರು.
ತೆಲಂಗಾಣದ ಕಾಂಗ್ರೆಸ್ ಉಸ್ತುವಾರಿ ದೀಪಾ ದಾಸ್ ಮುನ್ಷಿ ಅವರು ಶ್ರೀಲತಾ ಮತ್ತು ಶೋಭನ್ ರೆಡ್ಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ತೆಲಂಗಾಣ ಚಳವಳಿಯಲ್ಲಿ ಭಾಗವಹಿಸಿದ ನಾಯಕರಿಗೆ ಬಿಆರ್ಎಸ್ನಲ್ಲಿ ಸೂಕ್ತ ಮಾನ್ಯತೆ ಸಿಗುತ್ತಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.
ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಮಾತನಾಡಿ, ಅವಮಾನವನ್ನು ಸಹಿಸಲಾಗದೆ ಬಿಆರ್ಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ, ಕಾಂಗ್ರೆಸ್ ಸೇರುವ ಪ್ರತಿಯೊಬ್ಬ ನಾಯಕರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಎಂ. ಶ್ರೀಲತಾ ಮತ್ತು ಶೋಭನ್ ರೆಡ್ಡಿ ಅವರು ಫೆಬ್ರವರಿ 13 ರಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು.
ಶೋಭನ್ ರೆಡ್ಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀಲತಾ ಅವರು ಈ ತಿಂಗಳು ಕಾಂಗ್ರೆಸ್ ಸೇರಿದ ಹೈದರಾಬಾದ್ನ ಎರಡನೇ ಬಿಆರ್ಎಸ್ ನಾಯಕಿಯಾಗಿದ್ದಾರೆ.
ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಅವರು ಫೆಬ್ರವರಿ 10 ರಂದು ತೆಲಂಗಾಣ ಭವನದಲ್ಲಿ ಕರೆದಿದ್ದ ಕಾರ್ಪೊರೇಟರ್ಗಳ ತುರ್ತು ಸಭೆಗೆ ಶ್ರೀಲತಾ ಗೈರಾಗಿದ್ದರು. ಆಗಿನಿಂದಲೇ ಇವರು ಬಿಆರ್ಎಸ್ ತೊರೆಯಲಿದ್ದಾರೆ ಎಂದು ಹೇಳಲಾಗಿತ್ತು.
ಗ್ರೇಟರ್ ಹೈದರಾಬಾದ್ನ ಮಾಜಿ ಮೇಯರ್ ಬೊಂಟು ರಾಮ್ ಮೋಹನ್ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸೇರಿದ್ದರು. ಅವರು ಮುಂಬರುವ ಚುನಾವಣೆಯಲ್ಲಿ ಮಲ್ಕಾಜ್ ಗಿರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೂ ಮುನ್ನ ಬಿಆರ್ಎಸ್ ಕಾರ್ಪೊರೇಟರ್ ಮತ್ತು ಮಾಜಿ ಉಪ ಮೇಯರ್ ಬಾಬಾ ಫಾಸಿಹುದ್ದೀನ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
2016 ರಿಂದ 2021 ರವರೆಗೆ ರಾಮ್ ಮೋಹನ್ ಮತ್ತು ಫಾಸಿಹುದ್ದೀನ್ ಕ್ರಮವಾಗಿ ಮೇಯರ್ ಮತ್ತು ಉಪ ಮೇಯರ್ ಆಗಿದ್ದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಕಳಪೆ ಸಾಧನೆ ಮಾಡಿದ್ದ ಕಾಂಗ್ರೆಸ್ಗೆ ಇವರ ಸೇರ್ಪಡೆಯಿಂದ ಲಾಭವಾಗುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆಗಳು ತುಂಬಾ ಹತ್ತಿರದಲ್ಲಿರುವ ಈ ಸಮಯದಲ್ಲಿ ಹೈದರಾಬಾದ್ನ ಉಪಮೇಯರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಗಮನಾರ್ಹ.
ಇದನ್ನೂ ಓದಿ : ಅರುಣಾಚಲ ಪ್ರದೇಶ: ಕಾಂಗ್ರೆಸ್, ಎನ್ಪಿಪಿಯ ನಾಲ್ವರು ಶಾಸಕರು ಬಿಜೆಪಿ ಸೇರ್ಪಡೆ