ಮೀರತ್(ಉತ್ತರಪ್ರದೇಶ): ಜಿಲ್ಲೆಯ ಪಲ್ಲಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಶನಿವಾರ ರಾತ್ರಿ ಮೊಬೈಲ್ ಚಾರ್ಜರ್ ಕಿಡಿಯಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, 4 ಮಕ್ಕಳು ಮೃತಪಟ್ಟಿದ್ದಾರೆ. ಮೊಬೈಲ್ ಚಾರ್ಜರ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಪತಿ, ಪತ್ನಿ ಹಾಗೂ ನಾಲ್ವರು ಮಕ್ಕಳು ಸುಟ್ಟು ಗಾಯಗಳಿಂದ ಬಳಲಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳು ಸಾವನ್ನಪ್ಪಿದ್ದು, ಪೋಷಕರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಜಾಫರ್‌ನಗರದ ಸಿಖೇಡಾ ನಿವಾಸಿ ಜಾನಿ ಪುತ್ರ ತನ್ನ ಪತ್ನಿ ಬಬಿತಾ ಮತ್ತು ನಾಲ್ವರು ಮಕ್ಕಳಾದ ಸಾರಿಕಾ, ನಿಹಾರಿಕಾ (8), ಗೋಲು (6) ಮತ್ತು ಕಾಲು (5) ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜಾನಿ ದಿನಗೂಲಿ ಕಾರ್ಮಿಕ. ಹೋಳಿ ಹಬ್ಬದ ನಿಮಿತ್ತ ಶನಿವಾರದಂದು ಎಲ್ಲರೂ ಮನೆಯಲ್ಲೇ ಇದ್ದರು. ಸಂಜೆ ಜಾನಿ ಮತ್ತು ಅವರ ಪತ್ನಿ ಬಬಿತಾ ಹೋಳಿ ಹಬ್ಬಕ್ಕಾಗಿ ಖಾದ್ಯಗಳನ್ನು ತಯಾರಿಸುತ್ತಿದ್ದರು. ನಾಲ್ವರು ಮಕ್ಕಳು ಇನ್ನೊಂದು ಕೋಣೆಯಲ್ಲಿದ್ದರು. ಕೊಠಡಿಯೊಳಗೆಯೇ ಮೊಬೈಲ್ ಚಾರ್ಜರ್ ಅಳವಡಿಸಲಾಗಿತ್ತು. ಇದ್ದಕ್ಕಿದ್ದಂತೆ ಚಾರ್ಜರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಭಾರಿ ಸ್ಫೋಟ ಆಗಿದೆ, ಇದರಿಂದಾಗಿ ಇಡೀ ಕೋಣೆಗೆ ಬೆಂಕಿ ಆವರಿಸಿಕೊಂಡಿದೆ.
ಬೆಂಕಿಗೆ ಆಹುತಿಯಾದ ನಾಲ್ವರು ಮಕ್ಕಳು: ಮನೆಗೆ ಹೊತ್ತಿದ್ದ ಬೆಂಕಿಯು ಪರದೆಯ ಜೊತೆಗೆ ಹಾಸಿಗೆಗೆ ಆವರಿಸಿದೆ. ಹೀಗಾಗಿ ಸ್ವಲ್ಪ ಸಮಯದಲ್ಲೇ ಬೆಂಕಿಯ ಕೆನ್ನಾಲಿಗೆ ಬೃಹತ್ತಾಗಿ ಹರಡಿ ಕೋಣೆಯ ತುಂಬೆಲ್ಲಾ ಆವರಿಸಿದೆ. ಇದನ್ನು ನೋಡಿದ ಜಾನಿ ಮತ್ತು ಬಬಿತಾ ಕೋಣೆಯತ್ತ ಓಡಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರು, ಇದರಿಂದ ಅವರಿಬ್ಬರಿಗೂ ಬೆಂಕಿ ತಗುಲಿದೆ. ತಮ್ಮವರನ್ನು ರಕ್ಷಿಸಲು ಹಿರಿಯ ಮಗಳು ಹರಸಾಹಸ ಪಟ್ಟಳು, ಇದರಿಂದ ಆಕೆಯೂ ಬೆಂಕಿಗೆ ಆಹುತಿಯಾದಳು ಎಂದು ಹೇಳಲಾಗುತ್ತಿದೆ. ಬೆಂಕಿಯಲ್ಲಿ ಮನೆ ಹೊತ್ತಿ ಉರಿಯುತ್ತಿರುವುದನ್ನು ಕಂಡ ಅಕ್ಕಪಕ್ಕದ ಜನರು ರಕ್ಷಣೆಗಾಗಿ ಓಡಿ ಬಂದರು. ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದರು. ಅಗ್ನಿಶಾಮಕ ದಳ ಬೆಂಕಿ ನಂದಿಸಿ, ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಎಲ್ಲರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಎಲ್ಲಾ 4 ಮಕ್ಕಳು ಸಾವನ್ನಪ್ಪಿದ್ದಾರೆ ವೈದ್ಯರು ಘೋಷಿಸಿದರು.
ಬೆಂಕಿಯಲ್ಲಿ ಬೂದಿಯಾದ ಹೋಳಿ ಸಂತೋಷ: ಬೆಂಕಿ ಹೊತ್ತಿಕೊಂಡಾಗ ನಾನು ಮತ್ತು ಬಬಿತಾ ಅಡುಗೆಮನೆಯಲ್ಲಿ ಹೋಳಿ ಹಬ್ಬಕ್ಕೆ ಖಾದ್ಯಗಳನ್ನು ತಯಾರಿಸುತ್ತಿದ್ದೆವು. ಮಕ್ಕಳು ಕೋಣೆಯಲ್ಲಿ ಕುಳಿತು ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ಕೋಣೆಯಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ. ಅವರು ಕೋಣೆಯ ಕಡೆಗೆ ಓಡಿದಾಗ, ಹೊಗೆ ಬರುತ್ತಿರುವುದನ್ನು ನೋಡಿದೆ. ಆಗ ಮಕ್ಕಳು ಬೆಂಕಿಯಿಂದ ಸುತ್ತುವರೆದಿದ್ದರು. ಇದ್ದಕ್ಕಿದ್ದಂತೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಅರ್ಥವಾಗಲಿಲ್ಲ ಎಂದು ಜಾನಿ ಹೇಳಿದ್ದಾರೆ.
ಘಟನೆ ಬಗ್ಗೆ ಪಲ್ಲವಪುರಂ ಪೊಲೀಸ್ ಠಾಣೆಯ ಪ್ರಭಾರಿ ಮುನೇಶ್ ಸಿಂಗ್ ಮಾತನಾಡಿ, ಮಕ್ಕಳು ಶೇಕಡಾ 70 ರಷ್ಟು ಸುಟ್ಟಿದ್ದರು. ಪತಿ ಪತ್ನಿಗೂ ಶೇ 50ರಷ್ಟು ಸುಟ್ಟ ಗಾಯಗಳಾಗಿವೆ. ಅವರ ಸಂಬಂಧಿಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಓದಿ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ: ಐವರು ಕಾರ್ಮಿಕರು ಸಜೀವ ದಹನ - Chemical Factory Fire Incident