ರಾಂಚಿ (ಜಾರ್ಖಂಡ್): ಲೋಕಸಭೆ ಚುನಾವಣೆ ಜತೆಗೆ ರಾಜ್ಯದ ಗಂಡೇ ವಿಧಾನಸಭೆ ಉಪಚುನಾವಣೆಗೆ ಮೇ 20ರಂದು ಮತದಾನ ನಡೆಯಲಿದ್ದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪತ್ನಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕಿ ಕಲ್ಪನಾ ಸೊರೆನ್ ಅವರು ಈ ಉಪಚುನಾವಣೆಗೆ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ರಾಜ್ಯದ ಮುಖ್ಯಮಂತ್ರಿ ಚಂಪೈ ಸೊರೆನ್ ಉಪಸ್ಥಿತರಿದ್ದರು. ಇವರಲ್ಲದೇ ಸಚಿವ ಅಲಂಗೀರ್ ಆಲಂ, ಸಚಿವ ಬಾದಲ್ ಪತ್ರಲೇಖ್, ಸಚಿವೆ ಬೇಬಿ ದೇವಿ, ಮಿಥಿಲೇಶ್ ಠಾಕೂರ್, ಸತ್ಯಾನಂದ್ ಭೋಕ್ತಾ, ಬಸಂತ್ ಸೊರೆನ್, ರಾಜ್ಯಸಭಾ ಸಂಸದರಾದ ಸರ್ಫರಾಜ್ ಅಹ್ಮದ್, ಮಹುವಾ ಮಜಿ, ಶಾಸಕರಾದ ಸುದಿವ್ಯ ಕುಮಾರ್, ವಿನೋದ್ ಕುಮಾರ್ ಸಿಂಗ್ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು.
ಕಲ್ಪನಾ ಸೊರೆನ್ ಅವರು ಸೋಮವಾರ ಮಧ್ಯಾಹ್ನ ವಿಧಾನಸಭಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪೂರೈಕೆ ಅಧಿಕಾರಿ ಗುಲಾಂ ಸಮ್ದಾನಿ ಅವರ ಕೊಠಡಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಅವರು ಜೆಎಂಎಂ ನಾಯಕ ಮತ್ತು ರಾಜ್ಯಸಭಾ ಸಂಸದ ಡಾ.ಸರ್ಫರಾಜ್ ಅಹ್ಮದ್ ಅವರ ಪಾದ ಮುಟ್ಟಿ ಆಶೀರ್ವಾದ ಕೂಡ ಪಡೆದರು. ಇನ್ನು ಈ ಕ್ಷೇತ್ರದಿಂದ ಬಿಜೆಪಿ ದಿಲೀಪ್ ವರ್ಮಾ ಅವರನ್ನು ಕಣಕ್ಕಿಳಿಸಿದೆ. ಮೇ 20 ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ.
ರಾಜ್ಯದಲ್ಲಿನ ರಾಜಕೀಯ ಏರುಪೇರುಗಳ ನಡುವೆ 2023ರ ಡಿಸೆಂಬರ್‌ನಲ್ಲಿ ಗಂಡೇ ಶಾಸಕ ಸರ್ಫರಾಜ್ ಅಹ್ಮದ್ ಅವರು ರಾಜೀನಾಮೆ ನೀಡಿದ್ದರು. ಸರ್ಫರಾಜ್ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ನಂತರ ಜೆಎಂಎಂ ಸರ್ಫರಾಜ್ ಅಹ್ಮದ್ ಅವರನ್ನು ರಾಜ್ಯಸಭಾ ಸಂಸದರನ್ನಾಗಿ ಆಯ್ಕೆ ಮಾಡಲಾಯಿತು. ಹಾಗಾಗಿ ಲೋಕಸಭೆ ಚುನಾವಣೆಯ ಜೊತೆಗೆ, ಗಂಡೇ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ಘೋಷಣೆ ಮಾಡಲಾಗಿತ್ತು. ಘೋಷಣೆ ಬಳಿಕ ಕಲ್ಪನಾ ಸೊರೆನ್ ಅವರು ಈ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಲಿದ್ದಾರೆಂದು ಪಕ್ಷ ಹೇಳಿತ್ತು. ಅವರ ಈ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಚುನಾವಣೆ ರಂಗೇರಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಒಳ್ಳೆಯ ಬೆಳವಣಿಗೆ ಅಲ್ಲ: ಹೆಚ್.ಡಿ. ಕುಮಾರಸ್ವಾಮಿ - HD Kumaraswamy Press Meet