ಕೋಲ್ಕತಾ: ಬಹುನಿರೀಕ್ಷಿತ 'ದಿ ಡೈರಿ ಆಫ್ ಪಶ್ಚಿಮ ಬಂಗಾಳ' (The Diary of West Bengal) ಚಲನಚಿತ್ರದ ಬಿಡುಗಡೆಗೆ ತಡೆ ನೀಡಲು ಕಲ್ಕತ್ತಾ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಈ ಮೂಲಕ ಚಿತ್ರದ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.
1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸುತ್ತಲಿನ ಘಟನೆಗಳನ್ನು ಆಧರಿಸಿದ ಈ ಚಿತ್ರವನ್ನು ಸನೋಜ್ ಮಿಶ್ರಾ ನಿರ್ದೇಶಿಸಿದ್ದಾರೆ. ಈ ಚಿತ್ರ ಶುಕ್ರವಾರದಂದು ಬಿಡುಗಡೆಯಾಗಬೇಕಿತ್ತು.
ಆದರೆ, ಈ ಚಿತ್ರದ ಬಿಡುಗಡೆಯಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬರಬಹುದು ಎಂದು ಆರೋಪಿಸಿ, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿ ರಾಜೀವ್ ಕುಮಾರ್ ಝಾ ಎಂಬುವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠದ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸೋಮವಾರ ನಡೆದ ವಿಚಾರಣೆಯ ಸಮಯದಲ್ಲಿ, ನ್ಯಾಯಪೀಠವು ಅರ್ಜಿದಾರರನ್ನು ನೀವು ಚಲನಚಿತ್ರವನ್ನು ನೋಡಿದ್ದೀರಾ ಎಂದು ಪ್ರಶ್ನಿಸಿತ್ತು. ಅರ್ಜಿದಾರರು ನೋಡಿಲ್ಲವೆಂದು ಉತ್ತರಿಸಿದಾಗ, ಕೇವಲ ಊಹೆಗಳ ಆಧಾರದ ಮೇಲೆ ಯಾವುದೇ ಚಲನಚಿತ್ರದ ಬಿಡುಗಡೆಯನ್ನು ಈ ರೀತಿ ತಡೆಹಿಡಿಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಚಿತ್ರ ಬಿಡುಗಡೆಯಾದ ನಂತರ ಚಿತ್ರದಲ್ಲಿ ಏನಾದರೂ ಆಕ್ಷೇಪಾರ್ಹ ಅಂಶಗಳಿರುವುದು ಕಂಡುಬಂದರೆ, ಆಗ ಅರ್ಜಿದಾರರು ನ್ಯಾಯಾಲಯಕ್ಕೆ ಬರಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇಷ್ಟವಿರುವವರು ಚಿತ್ರವನ್ನು ನೋಡಬಹುದು ಮತ್ತು ಬೇಡವಾದವರು ಬಿಡಬಹುದು ಎಂದು ನ್ಯಾಯಾಲಯ ಹೇಳಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ, ಯೂಟ್ಯೂಬ್ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಚಿತ್ರದಲ್ಲಿ ಪಶ್ಚಿಮ ಬಂಗಾಳವನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಆಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಕೋಲ್ಕತಾ ಪೊಲೀಸರು ಚಿತ್ರದ ನಿರ್ದೇಶಕರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.
ಕಳೆದ ವರ್ಷ ರಾಜ್ಯದಲ್ಲಿ "ದಿ ಕೇರಳ ಸ್ಟೋರಿ" ಚಿತ್ರವನ್ನು ನಿಷೇಧಿಸಿದ್ದ ಪಶ್ಚಿಮ ಬಂಗಾಳ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ನಿರ್ದೇಶಕ ಸುಬ್ರತಾ ಸೇನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ನಿಷೇಧ ಹೇರಿದ್ದಕ್ಕಾಗಿ ರಾಜ್ಯ ಸರ್ಕಾರವು ವಿರೋಧ ಪಕ್ಷಗಳು, ನಾಗರಿಕ ಸಮಾಜ, ಬುದ್ಧಿಜೀವಿಗಳು ಮತ್ತು ಸೆಲೆಬ್ರಿಟಿಗಳಿಂದ ದೊಡ್ಡ ಪ್ರಮಾಣದ ಟೀಕೆಗಳನ್ನು ಎದುರಿಸಿತ್ತು.
ಇದನ್ನೂ ಓದಿ : ಭಾರತದಲ್ಲಿದ್ದಾರೆ 334 ಶತಕೋಟ್ಯಧಿಪತಿಗಳು: ಮುಂಚೂಣಿಯಲ್ಲಿ ಅದಾನಿ, ಅಂಬಾನಿ - billionaires in India