ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ಕಲಾಪವನ್ನು ಸೆರೆಹಿಡಿದಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳ ವೇದಿಕೆಗಳಿಂದ ತೆಗೆದುಹಾಕುವಂತೆ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ ಶನಿವಾರ ಸೂಚಿಸಿದೆ. ಈ ವಿಡಿಯೋದಲ್ಲಿ ಕೇಜ್ರಿವಾಲ್ ವಿಚಾರಣಾ ನ್ಯಾಯಾಲಯದಲ್ಲಿ ಮಾತನಾಡುತ್ತಿರುವ ದೃಶ್ಯಗಳು ಚಿತ್ರೀಕರಣ ಮಾಡಲಾಗಿತ್ತು.
ನ್ಯಾಯಾಲಯದ ಕಲಾಪದ ವಿಡಿಯೋದಿಂದ ದೆಹಲಿ ಹೈಕೋರ್ಟ್‌ನ ವಿಡಿಯೋ ಕಾನ್ಫರೆನ್ಸಿಂಗ್ ನಿಯಮಗಳ ಉಲ್ಲಂಘಿಸಲಾಗಿದೆ ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಅಮಿತ್ ಶರ್ಮಾ ಅವರನ್ನೊಳಗೊಂಡ ಪೀಠ, ಕೇಜ್ರಿವಾಲ್ ಪತ್ನಿ ಸುನಿತಾ ಮತ್ತು ಸಾಮಾಜಿಕ ಜಾಲತಾಣಗಳಾದ 'ಎಕ್ಸ್', 'ಮೆಟಾ' ಮತ್ತು ಯೂಟ್ಯೂಬ್ ಸೇರಿದಂತೆ ಆರು ಜನರಿಗೆ ನೋಟಿಸ್ ಜಾರಿ ಮಾಡಿದೆ.
ಅಲ್ಲದೇ, ಈ ರೀತಿಯ ವಿಡಿಯೋ ರೀ-ಪೋಸ್ಟ್ ಮಾಡಿದಿದ್ದರೂ, ಅದನ್ನು ತೆಗೆದುಹಾಕುವಂತೆ ಹೈಕೋರ್ಟ್ ಸೂಚಿಸಿದೆ. ಜುಲೈ 9ಕ್ಕೆ ವಿಚಾರಣೆ ಮುಂದೂಡಿದೆ.
ಈ ವಿಡಿಯೋ ಸಂಬಂಧ ವಕೀಲ ವೈಭವ್ ಸಿಂಗ್ ಎಂಬುವರು ಅರ್ಜಿ ಸಲ್ಲಿಸಿದ್ದರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೇಜ್ರಿವಾಲ್ ಮಾರ್ಚ್ 28ರಂದು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆಗ ನ್ಯಾಯಾಲಯದಲ್ಲಿ ಖುದ್ದು ವಾದ ಮಂಡಿಸಿದ್ದರು.
ಈ ವೇಳೆ, ವಿಡಿಯೋ ರೆಕಾರ್ಡಿಂಗ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಈ ರೀತಿ ಮಾಡುವುದನ್ನು ದೆಹಲಿಯ ಹೈಕೋರ್ಟ್ ನಿಯಮ-2021ರಡಿ ನಿಷೇಧಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ವಿಡಿಯೋವನ್ನು ಸುನೀತಾ ಕೇಜ್ರಿವಾಲ್ ಮತ್ತು ಇತರರು ರೀ-ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಕಲಾಪದ ಅಕ್ರಮ ರೆಕಾರ್ಡಿಂಗ್ ಆರೋಪ: ಸಿಎಂ ಕೇಜ್ರಿವಾಲ್ ಪತ್ನಿಯ ವಿರುದ್ಧ ಹೈಕೋರ್ಟ್ಗೆ ದೂರು