ಮುಂಬೈ(ಮಹಾರಾಷ್ಟ್ರ): ಭಾರತೀಯ ಕ್ರಿಕೆಟರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ಮಲಸಹೋದರ ವೈಭವ್ ಪಾಂಡ್ಯ ಎಂಬವರು ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರದ ಆರ್ಥಿಕ ಅಪರಾಧ ಘಟಕ ಇವರನ್ನು ಬಂಧಿಸಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅಂದಾಜು ನಾಲ್ಕು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ವೈಭವ್ ಪಾಂಡ್ಯರನ್ನು ಬಂಧಿಸಲಾಗಿದೆ. ಹಾರ್ದಿಕ್ ಮತ್ತು ಕೃನಾಲ್ ಸಹೋದರರ ಜತೆಗೂಡಿ ವೈಭವ್ ಕೆಲವು ವರ್ಷಗಳ ಹಿಂದೆ ಪಾಲಿಮರ್ ಉದ್ಯಮ ಕಂಪನಿ ಆರಂಭಿಸಿದ್ದರು. ಇದರಲ್ಲಿ ಪಾಂಡ್ಯ ಸಹೋದರರು ತಲಾ ಶೇ.40ರಷ್ಟು ಪಾಲು ಮತ್ತು ವೈಭವ್ ಶೇ.20ರಷ್ಟು ಹೂಡಿಕೆ ಮಾಡಿದ್ದರು.
ಆದರೆ, ವೈಭವ್ ತನ್ನ ವೈಯಕ್ತಿಕ ಲಾಭದ ಷೇರನ್ನು ಶೇ.20ರಿಂದ 33ಕ್ಕೆ ಹೆಚ್ಚಿಕೊಂಡಿದ್ದರು. ಈ ಮೂಲಕ ಸಹಭಾಗಿತ್ವದ ಕಂಪನಿಯಿಂದ ಅಂದಾಜು 4.3 ಕೋಟಿ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದರು. ಇದರಿಂದಾಗಿ ಹಾರ್ದಿಕ್ ಮತ್ತು ಕೃನಾಲ್ ಸಹೋದರರಿಗೆ ಆರ್ಥಿಕ ನಷ್ಟ ಉಂಟಾಗಿತ್ತು. ಈ ಘಟನೆ 2021ರಲ್ಲಿ ನಡೆದಿದೆ ಎಂದು ವರದಿಯಾಗಿವೆ.
ಮೋಸ ಮಾಡಿದ್ದು ಹೇಗೆ?: ಪಾಂಡ್ಯ ಸಹೋದರರ ನಡುವೆ ಇದೊಂದು ಪಾಲುದಾರಿತ್ವದ ಕಂಪನಿಯಾಗಿದ್ದರೆ, ಅದರ ಲಾಭ-ನಷ್ಟಗಳು ಮೂವರಿಗೂ ಸಮನಾಗಿ ಹಂಚಿಕೆಯಾಗಬೇಕಿತ್ತು. ಆದರೆ, ಕಂಪನಿಯಿಂದ ಬಂದ ಲಾಭವನ್ನು ಹಾರ್ದಿಕ್ ಮತ್ತು ಕೃನಾಲ್ ಅವರಿಗೆ ಹಂಚಿಕೆ ಮಾಡದೇ ಆರೋಪಿ ಪ್ರತ್ಯೇಕ ಕಂಪನಿಯನ್ನೇ ಆರಂಭಿಸಿದ್ದ. ಲಾಭದ ಹಣವನ್ನೂ ಈ ಹೊಸ ಕಂಪನಿಗೆ ವರ್ಗಾವಣೆ ಮಾಡಿದ್ದ. ಹೀಗಾಗಿಯೇ ಪಾಂಡ್ಯ ಸಹೋದರರಿಗೆ ನಷ್ಟ ಉಂಟಾಗಿತ್ತು ಎಂದು ತಿಳಿದು ಬಂದಿದೆ.
ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಭಾರತೀಯ ಕ್ರಿಕೆಟ್ನ ಹೆಸರಾಂತ ಆಟಗಾರರಾಗಿದ್ದಾರೆ. ಪ್ರಸ್ತುತ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಬ್ಯುಸಿಯಾಗಿದ್ದಾರೆ. ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಕೃನಾಲ್ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಆಡುತ್ತಿದ್ದಾರೆ.
ಇದನ್ನೂ ಓದಿ: ಪಾಂಡ್ಯ ಗೇಲಿ ಮಾಡಬೇಡಿ, ಅವರು ಭಾರತ ತಂಡದ ಸದಸ್ಯ: ಮುಂಬೈ ಫ್ಯಾನ್ಸ್‌ಗೆ ಬುದ್ಧಿ ಹೇಳಿದ ಕೊಹ್ಲಿ - Virat Kohli