ಕಾನ್ಪುರ (ಉತ್ತರಪ್ರದೇಶ): ಸಿನಿಮಾ ಸ್ಟೈಲಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಉತ್ತರಪ್ರದೇಶ ಪೊಲೀಸರು ಕೊನೆಗೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಮ್ ತರಬೇತುದಾರನೋರ್ವ ತನ್ನೊಂದಿಗೆ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು ಶವವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುಂಡಿ ತೋಡಿ ಹೂತಿಟ್ಟ ಆರೋಪದಡಿ ಅಂದರ್ ಆಗಿದ್ದಾನೆ. ಆರೋಪಿಯು ಕೊಲೆ ಮುಚ್ಚಿಹಾಕಲು ರೂಪಿಸಿದ ಯೋಜನೆಯೇ ರೋಚಕವಾಗಿದೆ.
ಪ್ರಕರಣದ ವಿವರ: ಆರೋಪಿ ವಿಮಲ್ ಸೋನಿ ಬಳಿ ಉದ್ಯಮಿಯೊಬ್ಬರ ಪತ್ನಿ ಏಕ್ತಾ ಗುಪ್ತಾ ಅವರು ಜಿಮ್ ತರಬೇತಿಗೆ ಬರುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ವಿವಾಹೇತರ ಸಂಬಂಧ ಬೆಳೆದಿದೆ. ಕೆಲ ದಿನಗಳ ಬಳಿಕ ಜಿಮ್ ತರಬೇತುದಾರನಿಗೆ ವಿವಾಹ ಕುದುರಿದೆ. ಇದು ಮಹಿಳೆಗೆ ಅಸಮಾಧಾನ ತಂದಿತ್ತು. ಆರೋಪಿಯ ವಿವಾಹಕ್ಕೆ ಮಹಿಳೆ ಆಕ್ಷೇಪ ಎತ್ತಿದ್ದಳು. ಇದೇ ಕಾರಣಕ್ಕಾಗಿ ಇಬ್ಬರ ಮಧ್ಯೆ ಹಲವು ಬಾರಿ ಕಿತ್ತಾಟವೂ ನಡೆದಿತ್ತು ಅನ್ನೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
#WATCH | Kanpur, Uttar Pradesh: Police arrest gym trainer for the murder of woman missing for 4 months and burying her dead body near the DM residence.
— ANI (@ANI) October 27, 2024
DCP East, Shravan Kumar Singh says, " the incident occurred on 24 june. the victim used to go to the accused's gym to train...… pic.twitter.com/yzj95HXb1a
ಜೂನ್ 24 ರಂದು ವಿಮಲ್ ಮತ್ತು ಏಕ್ತಾ ಅವರ ಮಧ್ಯೆ ಜಿಮ್ನಲ್ಲೇ ಮತ್ತೆ ಜಗಳವಾಗಿತ್ತು. ಈ ವೇಳೆ ಆಕೆಯನ್ನು ಕಾರಿನಲ್ಲಿ ಕರೆದೊಯ್ದ ವಿಮಲ್ ಈ ಬಗ್ಗೆ ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿದ್ದ. ಆದರೆ, ಆಕೆ ಸುತಾರಾಂ ಒಪ್ಪಿರಲಿಲ್ಲ. ಇದರಿಂದ ಕುಪಿತನಾದ ಜಿಮ್ ತರಬೇತುದಾರ ಮಹಿಳೆಯ ಕುತ್ತಿಗೆಗೆ ಬಲವಾಗಿ ಗುದ್ದಿದ್ದ. ಬಿದ್ದ ಹೊಡೆತಕ್ಕೆ ಮಹಿಳೆ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿ ಕಚೇರಿಯಲ್ಲಿ ಶವ ಸಂಸ್ಕಾರ: ಏಕ್ತಾ ಅವರ ಸಾವಿನಿಂದ ಭೀತಿಗೊಂಡ ವಿಮಲ್, ಕೊಲೆ ಪ್ರಕರಣ ಮುಚ್ಚಿ ಹಾಕಲು ಭರ್ಜರಿ ಪ್ಲಾನ್ ಮಾಡಿದ್ದಾನೆ. ಸಿನಿಮಾ ಮಾದರಿಯಲ್ಲಿ ಯೋಚಿಸಿ, ಶವವನ್ನು ಹತ್ತಿರವೇ ಇದ್ದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಹೂತು ಹಾಕಲು ನಿರ್ಧರಿಸಿದ್ದ. ರಾತ್ರೋರಾತ್ರಿ ಮಹಿಳೆಯ ಶವವನ್ನು ಡಿಸಿ ಕಚೇರಿಗೆ ತಂದು ಅಲ್ಲಿನ ನಿರ್ಜನ ಪ್ರದೇಶದಲ್ಲಿ ಯಾರಿಗೂ ಗೊತ್ತಾಗದ ಹಾಗೆ 8 ಅಡಿ ಆಳ ಗುಂಡಿ ತೋಡಿ ಶವಸಂಸ್ಕಾರ ಮಾಡಿದ್ದ. ಇಲ್ಲಿ ಹೂತಿದ್ದೇ ಆದಲ್ಲಿ ಪತ್ತೆ ಕಷ್ಟ ಎಂಬುದು ಆತನ ದುರಾಲೋಚನೆ ಆಗಿತ್ತು.
ಇತ್ತ ಪತ್ನಿ ಕಾಣೆಯಾದ ಬಗ್ಗೆ ಉದ್ಯಮಿ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು. ನಾಲ್ಕು ತಿಂಗಳು ತನಿಖೆ ನಡೆಸಿದರೂ ಪೊಲೀಸರಿಗೆ ಆರೋಪಿಯ ಪತ್ತೆ ಸಾಧ್ಯವಾಗಿರಲಿಲ್ಲ. ಕೊನೆಯದಾಗಿ ಆಕೆ ಜಿಮ್ಗೆ ತೆರಳಿದ್ದನ್ನು ಪತ್ತೆ ಮಾಡಿ, ವಿಮಲ್ನನ್ನು ವಿಚಾರಣೆ ನಡೆಸಿದಾಗ ರಹಸ್ಯ ಕೊಲೆ ಬಯಲಾಗಿದೆ.
ಮಹಿಳೆಯನ್ನು ತಾನೇ ಕೊಂದು, ಶವವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೂತಿಟ್ಟಿರುವುದನ್ನು ಆರೋಪಿ ಬಾಯ್ಬಿಟ್ಟಿದ್ದಾನೆ. ಶವವನ್ನು ಹೊರತೆಗೆದು ವಶಕ್ಕೆ ಪಡೆಯಲಾಗಿದೆ. ಸಿನಿಮಾದಿಂದ ಪ್ರೇರಣೆ ಪಡೆದು ಆತ ಡಿಸಿ ಕಚೇರಿಯಲ್ಲಿ ಶವ ಹೂತಿಟ್ಟಿದ್ದ ಎಂದು ಡಿಸಿಪಿ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆತ ಕೇಸ್ನಲ್ಲಿ ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸಿದ್ದ. ತನ್ನ ಮೊಬೈಲ್ ಟ್ರೇಸ್ ಮಾಡುವ ಸಾಧ್ಯತೆ ಕಾರಣ, ಅದನ್ನು ಸುತ್ತಲಿನ ಪ್ರದೇಶದಲ್ಲಿ ಬಳಸಿರಲಿಲ್ಲ. ಹೀಗಾಗಿ ಆರೋಪಿ ಪತ್ತೆ ಕಷ್ಟವಾಗಿತ್ತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಮದುವೆಗೆ ಒತ್ತಾಯಿಸಿದ್ದಕ್ಕೆ 7 ತಿಂಗಳ ಗರ್ಭಿಣಿ ಪ್ರೇಯಸಿ ಕೊಂದು ಹೂತು ಹಾಕಿದ ಪ್ರಿಯತಮ!