ಅಹ್ಮದಾಬಾದ್ (ಗುಜರಾತ್): ಮಕ್ಕಳು ಸೇರಿದಂತೆ 28 ಜನರ ಸಾವಿಗೆ ಕಾರಣವಾದ ರಾಜ್‌ಕೋಟ್‌ನ ಗೇಮಿಂಗ್ ಸೆಂಟರ್ ದುರಂತಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ವಿಶೇಷ ಪೀಠವು ಸುಮೊಟೋ(ಸ್ವಯಂ ಪ್ರೇರಿತ ಪ್ರಕರಣ) ದಾಖಲಿಸಿಕೊಂಡಿದ್ದು, ಇದೊಂದು ಮಾನವ ನಿರ್ಮಿತ ದುರಂತ ಎಂದು ಹೇಳಿದೆ. ನ್ಯಾಯಾಧೀಶರಾದ ಬಿರೇನ್ ವೈಷ್ಣವ್ ಹಾಗೂ ದೇವನ್ ದೇಸಾಯಿ ಅವರಿದ್ದ ನ್ಯಾಯಪೀಠ, ಗೇಮಿಂಗ್ ಝೋನ್ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆಗಳಿಲ್ಲದೆ ನಿರ್ಮಾಣವಾಗಿದೆ ಎಂದು ಹೇಳಿದೆ.
ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ಗಳ ವಕೀಲರು ನಾಳೆ (ಸೋಮವಾರ) ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿರುವ ಪೀಠ, ಯಾವ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಅಧಿಕಾರಿಗಳು ಈ ಘಟಕಗಳನ್ನು ಈ ಕಟ್ಟಡ ನಿರ್ಮಿಸಲು ಅನುಮತಿಸಿದರು ಎಂಬ ಮಾಹಿತಿಯನ್ನು ಒದಗಿಸುವಂತೆ ಅವರಿಗೆ ಸೂಚನೆ ನೀಡಿದೆ.
ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಶನಿವಾರ 28 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು, ಭಾನುವಾರ ಬೆಳಗ್ಗೆ ನಾನಾ-ಮಾವಾ ರಸ್ತೆಯಲ್ಲಿ ಘಟನಾ ಸ್ಥಳಕ್ಕೆ ಮತ್ತು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದರು. ನಂತರ ಪ್ರತಿಕ್ರಿಯಿಸಿ, ರಾಜ್‌ಕೋಟ್‌ನಲ್ಲಿನ ಗೇಮಿಂಗ್ ವಲಯವು ಗುಜರಾತ್ ಸಮಗ್ರ ಸಾಮಾನ್ಯ ಅಭಿವೃದ್ಧಿ ನಿಯಂತ್ರಣ ನಿಯಮಗಳ (ಜಿಡಿಸಿಆರ್) ಲೋಪದೋಷಗಳ ಲಾಭವನ್ನು ಪಡೆದುಕೊಂಡಿದೆ ಎಂಬ ಪತ್ರಿಕೆಗಳ ವರದಿಗಳನ್ನು ಓದಿ ನಮಗೆ ಆಘಾತವಾಗಿದೆ ಎಂದರು.
ಪತ್ರಿಕೆಗಳ ವರದಿಯ ಪ್ರಕಾರ, ಈ ಗೇಮಿಂಗ್ ಝೋನ್ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆಗಳಿಲ್ಲದೆ ನಿರ್ಮಾಣವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ನಿಗಮಗಳ ಪ್ರಾದೇಶಿಕ ವ್ಯಾಪ್ತಿಯಲ್ಲಿರುವ ಆಯಾ ಮನರಂಜನಾ ವಲಯಗಳ ಬಳಕೆಗೆ ಮತ್ತು ಅಗ್ನಿ ಸುರಕ್ಷತಾ ನಿಯಮಗಳ ಪಾಲಿಸುವ ಪರವಾನಗಿಗಳನ್ನು ನೀಡಲಾಗಿದೆಯೇ ಎಂದು ರಾಜ್ಯ ಸರ್ಕಾರ ಮತ್ತು ಮುನ್ಸಿಪಲ್ ಕಾರ್ಪೊರೇಷನ್ಗಳಿಂದ ಹೈಕೋರ್ಟ್ ತಿಳಿದುಕೊಳ್ಳಲು ಬಯಸಿದೆ.
ವರದಿಯ ಪ್ರಕಾರ, ಅಗ್ನಿಶಾಮಕ ಎನ್‌ಒಸಿ ಮತ್ತು ನಿರ್ಮಾಣ ಅನುಮತಿ ಸೇರಿದಂತೆ ಅಗತ್ಯ ಅನುಮತಿಗಳು, ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ತೆಗೆದುಕೊಳ್ಳುವಲ್ಲಿ ಉಂಟಾದ ಅಡೆತಡೆಗಳನ್ನು ನಿವಾರಿಸಲು ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್ ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ರಾಜ್‌ಕೋಟ್ ಮಾತ್ರವಲ್ಲ, ಅಹಮದಾಬಾದ್ ನಗರದಲ್ಲಿಯೂ ಇಂತಹ ಟಿಆರ್‌ಪಿ ಗೇಮಿಂಗ್ ತಲೆ ಎತ್ತಿವೆ. ಇವು ಸಾರ್ವಜನಿಕ ಸುರಕ್ಷತೆಗೆ, ವಿಶೇಷವಾಗಿ ಮಕ್ಕಳಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತವೆ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: ರಾಜ್‌ಕೋಟ್ ಅಗ್ನಿ ದುರಂತ: ಮೃತರ ಸಂಖ್ಯೆ 28ಕ್ಕೇರಿಕೆ, ಘಟನಾ ಸ್ಥಳಕ್ಕೆ ಗುಜರಾತ್ ಸಿಎಂ ಭೇಟಿ - Rajkot Fire Accident