ಪಾಣಿಪತ್ (ಹರಿಯಾಣ) : ವರದಕ್ಷಿಣೆ ಕಾಟಕ್ಕೆ ಅದೆಷ್ಟೋ ವಿವಾಹ ಸಂಬಂಧಗಳು ಮುರಿದು ಬಿದ್ದರೆ, ಇನ್ನು ಹಲವು ಗೃಹಿಣಿಯರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದು ಕಾನೂನಾತ್ಮಕವಾಗಿ ಅಪರಾಧವಾದರೂ, ಸಮಾಜದಲ್ಲಿ ಎಗ್ಗಿಲ್ಲದೇ ಸಾಗಿದೆ. ಇಂಥ ವ್ಯವಸ್ಥೆಯ ನಡುವೆ ಇಲ್ಲಿನ ಬಿಜೆಪಿ ನಾಯಕರೊಬ್ಬರು ತಮ್ಮ ಪುತ್ರನಿಗೆ ಕೇವಲ 1 ರೂಪಾಯಿ ವರದಕ್ಷಿಣೆಯಾಗಿ ಪಡೆದು ಅದ್ಧೂರಿ ವಿವಾಹ ಮಾಡಿಸಿದ್ದಾರೆ.
ನಿಜ, ತನ್ನ ಪುತ್ರ ಪೊಲೀಸ್ ಅಧಿಕಾರಿಯಾಗಿದ್ದರೂ, ವಧುವಿನ ಕಡೆಯಿಂದ ಯಾವುದೇ ಹಣದ ಆಪೇಕ್ಷೆ ಪಡದೆ ಕೇವಲ 1 ರೂಪಾಯಿಯನ್ನು ವರದಕ್ಷಿಣೆ ರೂಪದಲ್ಲಿ ಪಡೆದು ವಿವಾದ ಜರುಗಿಸಿದ್ದಾರೆ. ಬಿಜೆಪಿ ನಾಯಕನ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಹರಿಯಾಣದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೃಷ್ಣ ಚೌಕ್ಕರ್ ಸಮಲ್ಖಾ ಅವರು ತಮ್ಮ ಪುತ್ರನಿಗೆ, ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಅಧ್ಯಕ್ಷ ಭೂಪಾಲ್ ಸಿಂಗ್ ಖಾದ್ರಿ ಅವರ ಪುತ್ರಿಯೊಂದಿಗೆ ಈಚೆಗೆ ವಿವಾಹ ನಡೆಯಿತು. ಗಂಡಿನ ಕಡೆಯವರು ವರದಕ್ಷಿಣೆ ಕೇಳದಿದ್ದರೂ, ಹೆಣ್ಣಿನ ಕಡೆಯಿಂದ ಸಂಪ್ರದಾಯ ಎಂಬಂತೆ ಮದುವೆ ಸಮಾರಂಭದಲ್ಲಿ ಹಣವನ್ನು ನೀಡಲು ಮುಂದಾದರು. ಈ ವೇಳೆ ಕೃಷ್ಣ ಚೌಕ್ಕರ್ ಅವರು, ಅದರಲ್ಲಿ 1 ರೂಪಾಯಿ ಮತ್ತು ತೆಂಗಿನ ಕಾಯಿಯನ್ನು ಪಡೆದುಕೊಂಡು ಉಳಿದ ಹಣವನ್ನು ಹೆಣ್ಣಿನ ತಂದೆಗೆ ವಾಪಸ್ ನೀಡಿದರು.
ತಾವು ವರದಕ್ಷಿಣೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳುವ ಮೂಲಕ ಹಣವನ್ನು ವಾಪಸ್ ನೀಡಿದರು. ಇದು ವಿವಾಹಕ್ಕೆ ಆಗಮಿಸಿದ್ದ ಬಂಧುಗಳು, ಅತಿಥಿಗಳಲ್ಲದೇ, ಸುತ್ತಮುತ್ತಲ ಊರಿನ ಜನರ ಹೊಗಳಿಕೆಗೆ ಪಾತ್ರವಾಯಿತು. ಬಿಜೆಪಿ ನಾಯಕನ ಆದರ್ಶವನ್ನು ಜನರು ಕೊಂಡಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕ ಕೃಷ್ಣ ಚೌಕ್ಕರ್, ವರದಕ್ಷಿಣೆ ಅನಿಷ್ಟ ಪದ್ಧತಿಯಾಗಿದ್ದು, ಸಮಾಜಕ್ಕೆ ಶಾಪವಾಗಿದೆ. ಇದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ವರದಕ್ಷಿಣೆ ಪದ್ಧತಿ ಕೊನೆಗಾಣಿಸುವುದರಿಂದ ಮಾತ್ರ ಮಗ - ಮಗಳ ನಡುವಿನ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದಿದ್ದಾರೆ.
ವರದಕ್ಷಿಣೆಗಾಗಿ ಸೊಸೆ ಕೊಂದ ಅತ್ತೆ: ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ವರದಕ್ಷಿಣೆಗಾಗಿ ಸೊಸೆಯನ್ನು ಆಕೆಯ ಅತ್ತೆಯೇ ಬೆಂಕಿ ಹಚ್ಚಿ ಸುಟ್ಟು ಕೊಂದು ಹಾಕಿದ ಘಟನೆ ಈಚೆಗೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಹಣದ ವಿಚಾರವಾಗಿ ಸೊಸೆಗೆ ಬೆಂಕಿ ಹಚ್ಚಲಾಗಿತ್ತು. ಬಳಿಕ ಕುಟುಂಬಸ್ಥರೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದರು. ದುರಾದೃಷ್ಟವಶಾತ್ ಸಂತ್ರಸ್ತ ಮಹಿಳೆ ತೀವ್ರ ಸುಟ್ಟ ಗಾಯದಿಂದ ಸಾವಿಗೀಡಾಗಿದ್ದಳು. ನಾಲ್ವರ ವಿರುದ್ಧ ಕೊಲೆ ಕೇಸ್ ಕೂಡಾ ದಾಖಲಿಸಲಾಗಿತ್ತು.
ಇದನ್ನೂ ಓದಿ: ಬೆಳಗಾವಿ: ವರದಕ್ಷಿಣೆ ದುರಾಸೆ, ಮದುವೆ ದಿನವೇ ಜೈಲು ಪಾಲಾದ ಸರ್ಕಾರಿ ನೌಕರ