ಮುಂಬೈ (ಮಹಾರಾಷ್ಟ್ರ): ಮರಾಠ ಮೀಸಲಾತಿ ಚಳವಳಿಯ ಮುಖಂಡ ಮನೋಜ್ ಜಾರಂಜ್ ಅವರ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಅಂಗೀಕರಿಸಿದ್ದರಿಂದ ಅವರು ಶನಿವಾರ ಧರಣಿಯನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದ್ದಾರೆ. ಇದಾದ ಬಳಿಕ ಮರಾಠ ಮೀಸಲಾತಿ ಕಾರ್ಯಕರ್ತರು ಜಯಘೋಷಗಳನ್ನು ಕೂಗಿದರು.
ಬೇಡಿಕೆಗಳನ್ನು ಈಡೇರಿಸುವ ಕುರಿತು ಭರವಸೆ ಕೊಟ್ಟ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಮನೋಜ್ ಜಾರಂಜ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಿದ್ದಾರೆ. ಅಲ್ಲದೆ, ಉಪವಾಸ ಮುರಿದ ನಂತರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮನೋಜ್ ಜಾರಂಜ್ ಅವರು ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನವಿ ಮುಂಬೈಗೆ ಆಗಮಿಸಿದ್ದಾರೆ.
ಮಧ್ಯರಾತ್ರಿ ಸರ್ಕಾರದ ನಿಯೋಗ ಭೇಟಿ: ಮರಾಠ ಮೀಸಲಾತಿ ಚಳವಳಿಯ ಮುಖಂಡ ಮನೋಜ್ ಜಾರಂಜ್ ಅವರನ್ನು ಭೇಟಿ ಮಾಡಲು ಸಂಪುಟ ಸಚಿವರಾದ ದೀಪಕ್ ಕೇಸ್ಕರ್ ಮತ್ತು ಮಂಗಲ್ ಪ್ರಭಾತ್ ಲೋಧಾ ನೇತೃತ್ವದ ನಿಯೋಗ ಆಗಮಿಸಿತು. ಮನೋಜ್ ಜಾರಂಜ್ ಅವರ ಎಲ್ಲಾ ಬೇಡಿಕೆಗಳ ಮೇಲೆ ಕರಡು ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲಾಯಿತು. ಆ ಸುಗ್ರೀವಾಜ್ಞೆಯ ಪ್ರತಿಯನ್ನು ಮನೋಜ್ ಜಾರಂಜ್ ಅವರಿಗೆ ಹಸ್ತಾಂತರಿಸಲಾಯಿತು. ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗಿದೆ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಜಿಆರ್‌ಒ ನೀಡುವಂತೆ ಒತ್ತಾಯಿಸಲಾಯಿತು.
ಮನೋಜ್ ಜಾರಂಜ್ ವಿವಿಧ ಬೇಡಿಕೆಗಳೇನು?: ಮೀಸಲಾತಿ ಪ್ರತಿಭಟನೆಯ ವೇಳೆ ಮರಾಠ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಮೀಸಲಾತಿ ನಿರ್ಧಾರ ಆಗುವವರೆಗೆ ಮರಾಠ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಇದರೊಂದಿಗೆ ಸರ್ಕಾರಿ ನೇಮಕಾತಿಯಲ್ಲಿ ಮರಾಠರಿಗೆ ಮೀಸಲು ನೀಡಬೇಕು. ಕುಂಬಿ ದಾಖಲೆಗಳನ್ನು ಹುಡುಕಲು ನಮಗೆ ಸಹಾಯಬೇಕು. ಕುಂಬಿ, ಕೃಷಿಕ ಸಮುದಾಯವು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವರ್ಗಕ್ಕೆ ಸೇರುತ್ತದೆ. ಎಲ್ಲಾ ಮರಾಠರಿಗೆ ಕುಂಬಿ ಪ್ರಮಾಣಪತ್ರವನ್ನು ನೀಡಬೇಕು.
ಸರ್ಕಾರವು 54 ಲಕ್ಷ ಕುಂಬಿ ದಾಖಲೆಗಳು (ಮರಾಠ ವ್ಯಕ್ತಿ/ಕುಟುಂಬವು ಕುಂಬಿ ಸಮುದಾಯಕ್ಕೆ ಸೇರಿದೆ ಎಂದು ತೋರಿಸುವ ದಾಖಲೆಗಳು) ಪತ್ತೆಯಾಗಿವೆ ಎಂದು ಹೇಳಿದ್ದು, ಅದರಲ್ಲಿ 37 ಲಕ್ಷ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಪ್ರಮಾಣಪತ್ರಗಳನ್ನು ಪಡೆದುಕೊಂಡ ವ್ಯಕ್ತಿಗಳು ಯಾರು? ನಮಗೆ ಡೇಟಾ ಬೇಕು. ಕುಂಬಿ ದಾಖಲೆಗಳು ಪತ್ತೆಯಾದ ನಂತರ ಎರಡು ಕೋಟಿಗೂ ಹೆಚ್ಚು ಮರಾಠಿಗರು ಒಬಿಸಿ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಮೀಸಲಾತಿ ಪಡೆಯಲು ಎಲ್ಲಾ ಮರಾಠಿಗರು ಕುಂಬಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕು. ಒಬ್ಬ ವ್ಯಕ್ತಿಯು ಕುಂಬಿ ಜಾತಿಗೆ ಸೇರಿದವನೆಂದು ತಿಳಿದ ನಂತರ, ಅವನ/ ಅವಳ ಎಲ್ಲಾ ಸಂಬಂಧಿಕರಿಗೆ ಮೀಸಲಾತಿ ನೀಡಬೇಕು. ಪ್ರಸ್ತುತ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಮರಾಠರಿಗೆ ಮೀಸಲಿಟ್ಟ ಕೆಲವು ಸ್ಥಾನಗಳನ್ನು ನೀಡಬೇಕು ಎಂದು ಮನೋಜ್ ಜಾರಂಜ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಒಳ್ಳೆಯ ಕೆಲಸ- ಜಾರಂಜ್: ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ನಂತರ ಮರಾಠ ಮೀಸಲಾತಿ ಚಳವಳಿಯ ಮುಖಂಡ ಮನೋಜ್ ಜಾರಂಜ್ ಮಾತನಾಡಿ, ''ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ವಿರೋಧ ಈಗ ಮುಗಿದಿದೆ. ನಮ್ಮ ಮನವಿಯನ್ನು ಸರ್ಕಾರದಿಂದ ಸ್ವೀಕರಿಸಲಾಗಿದೆ, ನಾವು ಅವರ ಮನವಿಯನ್ನು ಸ್ವೀಕರಿಸುತ್ತೇವೆ" ಎಂದು ಜಾರಂಜ್ ಹೇಳಿದ್ದಾರೆ. ಇಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಸಮ್ಮುಖದಲ್ಲಿ ಮನೋಜ್ ಜಾರಂಜ್ ಅವರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲಿದ್ದಾರೆ.
ಇದನ್ನೂ ಓದಿ: ನ್ಯುಮೋನಿಯಾದಿಂದ 220 ಮಕ್ಕಳು ಸಾವು; ಪಾಕಿಸ್ತಾನದಲ್ಲಿ ದುರಂತ