ಭದ್ರಾಚಲಂ: ಆಟವಾಡುವಾಗ ಮೂಗಿನೊಳಗೆ ಪೆನ್ನು ಹಾಕಿಕೊಳ್ಳುವುದು, ಪೆನ್ನಿನ ಕ್ಯಾಪ್ ನುಗ್ಗುವಂತಹ ಘಟನೆಗಳು ಮಕ್ಕಳ ಪ್ರಾಣಕ್ಕೆ ಕಂಟಕ ತಂದೊಡ್ಡುತ್ತವೆ. ಅದೇ ರೀತಿ ನಾಲ್ಕು ವರ್ಷದ ಕಂದಮ್ಮ ಆಟವಾಡುವಾಗ ತಲೆಗೆ ಚುಚ್ಚಿದ ಪೆನ್ನಿನಿಂದ ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.
ಸಾಮಾನ್ಯವಾಗಿ ಎಳೆವಯಸ್ಸಿನಲ್ಲಿ ಮಕ್ಕಳು ತಮಗೆ ಆಕರ್ಷಣೀಯವಾದ ವಸ್ತುಗಳನ್ನು ಹಠ ಮಾಡಿ ಪಡೆಯುತ್ತವೆ. ಮಕ್ಕಳ ಅಳುವಿಗೆ ಕಟ್ಟುವಿದ್ದು, ಪೆನ್ನು ಸೇರಿದಂತೆ ಹಲವು ಸಣ್ಣ ವಸ್ತುಗಳನ್ನು ನೀಡುತ್ತೇವೆ. ಇವುಗಳಿಂದ ಯಾವುದೇ ಅಪಾಯ ಆಗುವುದಿಲ್ಲ ಎಂದುಕೊಂಡರೆ ಅದು ತಪ್ಪು. ಇವು ಅವರ ಸಾವಿಗೂ ಕಾರಣವಾಗಬಹುದು. ಅಂತಹದ್ದೇ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಭದ್ರಾಚಲಂನ ಸುಭಾಶ್ನಗರದಲ್ಲಿ ನಡೆದಿದೆ. ಆಟವಾಡುತ್ತಿದ್ದ ಮಗುವಿನ ತಲೆಗೆ ಪೆನ್ನು ಬಲವಾಗಿ ಚುಚ್ಚಿದ ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದೆ.
ಸೋಮವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದ ಮಗು ಜಾರಿ ಕೆಳಗೆ ಬಿದ್ದಿದೆ. ಈ ವೇಳೆ ಪೆನ್ನೊಂದು ಮಗುವಿನ ತಲೆಗೆ ಬಲವಾಗಿ ಚುಚ್ಚಿದೆ. ಎಳೆಯ ವಯಸ್ಸಿನ ಮಗುವಿನ ತಲೆಗೆ ಚುಚ್ಚಿದ ಪೆನ್ನು ಆಳಕ್ಕೆ ಹೊಕ್ಕಿದ್ದು, ಮೆದುಳಿನವರೆಗೆ ನುಗ್ಗಿದೆ. ತಕ್ಷಣಕ್ಕೆ ಕುಟುಂಬ ಸದಸ್ಯರು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ವೈದ್ಯರ ಸಲಹೆ ಮೇರೆಗೆ ಕಮ್ಮಮ್ಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಶಸ್ತ್ರ ಚಿಕಿತ್ಸೆ ನೀಡಿ, ತಲೆಯೊಳಗೆ ಹೊಕ್ಕಿದ್ದ ಪೆನ್ನನ್ನು ತೆಗೆಯಲಾಗಿದೆ. ಇದಾದ ಬಳಿಕ ಮಗುವನ್ನು 48ಗಂಟೆಗಳ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು. ಆದರೆ, ಮಗು ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ಯುಕೆಜಿ ಓದುತ್ತಿದ್ದ ಮಗು ರಿಯಾನ್ಷಿಕಾ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಬಳ್ಳಾರಿ: ಸಾಂಬಾರು ಪಾತ್ರೆಗೆ ಬಿದ್ದು ಮಗು ಸಾವು