ಹೈದರಾಬಾದ್(ತೆಲಂಗಾಣ): ನೈಸರ್ಗಿಕ ವಿಕೋಪ ಮತ್ತು ಭಾರೀ ಪ್ರಮಾಣದ ಪ್ರವಾಹದಿಂದ ಪಾರಾಗಲು ಇಲ್ಲಿನ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC), ಜಪಾನ್ ಮಾದರಿಯ ಬೃಹತ್ ಟನಲ್ (ಸುರಂಗ) ಗಳನ್ನು ನಿರ್ಮಿಸಲು ಮುಂದಾಗಿದೆ. ಈ ಬೃಹದಾಕಾರದ ಟನಲ್ಗಳು ಶೇ. 90ರಷ್ಟು ಪ್ರವಾಹದಿಂದ ರಕ್ಷಿಸಲು ಸಹಕಾರಿ ಎಂಬುದನ್ನು ಮನಗಂಡು ಈ ಸಾಹಸಕ್ಕೆ ಕೈ ಹಾಕುತ್ತಿರುವುದಾಗಿ GHMC ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಹೈದರಾಬಾದ್ ಸೇರಿದಂತೆ ದೆಹಲಿ, ಚೆನ್ನೈ, ಮುಂಬೈ, ಬೆಂಗಳೂರು, ವಿಜಯವಾಡದಂತಹ ಹಲವು ಮಹಾ ನಗರಗಳು ಇತ್ತೀಚೆಗೆ ಅತಿಯಾದ ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿದ್ದು, ಇದರಿಂದ ಪಾರಾಗಲು ಜಪಾನ್ ತಂತ್ರಜ್ಞಾನದ ಮಾದರಿ ಅಳವಡಿಕೆ ಹೆಚ್ಚು ಸೂಕ್ತ. ಜಪಾನ್ ದೇಶ ಹೊಂದಿರುವ ಬೃಹತ್ ಸುರಂಗವನ್ನು ಪ್ರವಾಹ ಪೀಡಿತ ಪ್ರದೇಶದಲ್ಲಿ ನಿರ್ಮಿಸಿದರೆ ಅನುಕೂಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಇದು ಸುಲಭದ ಕೆಲಸವೂ ಅಲ್ಲವೆಂದು ತಿಳಿದು ಕನಿಷ್ಠ ಪಕ್ಷ ಸಣ್ಣ ಪ್ರಮಾಣದ ಸುರಂಗಗಳನ್ನಾದರೂ ನಿರ್ಮಾಣ ಮಾಡಬೇಕಿದೆ ಎಂದು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆಲೋಚನೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಸಲ ಮಳೆ ಸುರಿದಾಗ ಹೈದರಾಬಾದ್‌ನಂತಹ ಬೃಹತ್ ನಗರಗಳಲ್ಲಿ ಪ್ರವಾಹ ಸಾಮಾನ್ಯ. ಆದರೆ, ಇದರಿಂದಾಗುವ ಹಾನಿ ದೊಡ್ಡದು. ಪ್ರವಾಹ ಮತ್ತು ಹಾನಿ ತಡೆಯಲು ಸುರಂಗಗಳ ಮೂಲಕ ನೀರು ಹರಿಸುವ ವಿಧಾನ ಸೂಕ್ತ. ಭಾರೀ ಪ್ರಮಾಣದ ಮಳೆ ಆದಾಗ ರಸ್ತೆಗಳಲ್ಲಿ ನಿಲ್ಲುವ ಬದಲು ಎಲ್ಲಾ ಪ್ರವಾಹದ ನೀರು ಈ ಸುರಂಗಗಳ ಮೂಲಕ ಹರಿದು ಹೋಗಲಿದೆ. ಜಪಾನ್ ದೇಶದ ಟೋಕಿಯೊದಲ್ಲಿ ಸಣ್ಣ ಮತ್ತು ದೊಡ್ಡ ಪ್ರಮಾಣದ 100 ನದಿಗಳು ಸುರಂಗಗಳ ಮೂಲಕ ಹರಿಯುತ್ತವೆ. ಈ ರೀತಿಯ ತಂತ್ರಜ್ಞಾನದ ಸಹಾಯದಿಂದ ಜಪಾನ್ ಶೇ. 90ರಷ್ಟು ಪ್ರವಾಹವನ್ನು ತಡೆದಿದೆ. ಅಲ್ಲಿನ ಸರ್ಕಾರವು ಟೋಕಿಯೋದ ಉತ್ತರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೆಳಗೆ 18 ವರ್ಷಗಳ ಹಿಂದೆಯೇ ಸುರಂಗವನ್ನು ನಿರ್ಮಿಸಿ ಪ್ರವಾಹದ ನೀರನ್ನು ಕಾಲುವೆಗಳಿಗೆ ಜೋಡಿಸಿದೆ. ಅಂದಿನಿಂದ ಸುರಂಗವು ನಗರ ಮತ್ತು ನಗರದ ಜನರನ್ನು ರಕ್ಷಿಸುತ್ತಿದೆ. ಇಂತಹ ತಂತ್ರಜ್ಞಾನವನ್ನು ಹೈದರಾಬಾದ್‌ನಲ್ಲಿ ರೂಪಿಸಲೆಂದೇ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನ ಎಂಜಿನಿಯರ್‌ಗಳು ಟೋಕಿಯೊಗೆ ತೆರಳಿ ಸುರಂಗ ಮಾರ್ಗವನ್ನು ಪರಿಶೀಲಿಸಿದ್ದರು.
ಈ ಹಿಂದೆ, ಹೈದರಾಬಾದ್‌ನಲ್ಲಿ ಕೈಗೊಳ್ಳಬೇಕಾದ ಪ್ರವಾಹ ನಿಯಂತ್ರಣ ಕ್ರಮಗಳಿಗೆ ಧನಸಹಾಯಕ್ಕಾಗಿ GHMCಯು ಜಪಾನ್ ಅಂತಾರಾಷ್ಟ್ರೀಯ ಕೋಆಪರೇಷನ್ ಬ್ಯಾಂಕ್ ಅನ್ನು ಸಂಪರ್ಕಿಸಿತ್ತು. ಈ ಭೇಟಿಯ ಹಿನ್ನೆಲೆ ಕಳೆದ ವರ್ಷ ಜಪಾನ್ ಪ್ರತಿನಿಧಿಗಳು ಹೈದರಾಬಾದ್‌ಗೆ ಬಂದು ನಗರವನ್ನು ಪರಿಶೀಲಿಸಿ ತೆರಳಿದ್ದರು. ಅವರ ಸಲಹೆ ಮೇರೆಗೆ GHMC ಎಂಜಿನಿಯರ್‌ಗಳು ಇತ್ತೀಚೆಗೆ ಟೋಕಿಯೊಗೆ ತೆರಳಿದ್ದು, ಪ್ರವಾಹ ನಿಯಂತ್ರಣ ಮಾಡುವ ಅಲ್ಲಿನ ಬೃಹತ್ ಸುರಂಗವನ್ನು ಅವರು ವೀಕ್ಷಿಸಿದ್ದರು. ಆದರೆ, ಹೈದರಾಬಾದ್‌ಗೆ ಈ ಪ್ರಮಾಣದ ಬೃಹತ್ ಸುರಂಗಗಳು ಅಗತ್ಯವಿಲ್ಲ. ಆದರೆ, ಅದೇ ರೀತಿಯ ಸಣ್ಣ ಪ್ರಮಾಣದ ಟನಲ್ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಪ್ರವಾಹ ಶೇ. 90ರಷ್ಟು ಕಡಿಮೆ: ಜಪಾನ್ ದೇಶದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಕಾಲುವೆಗಳನ್ನು ಸುರಂಗಕ್ಕೆ ಜೋಡಿಸಿದೆ. ಪ್ರವಾಹದ ನೀರು ಎಷ್ಟೇ ಎತ್ತರಕ್ಕೆ ಬಂದರೂ ಸುರಂಗದೊಳಗೆ ಹೋದ ನಂತರ ನಿಧಾನವಾಗಿ ಹರಿಯುತ್ತದೆ. ಒಳಗಿನ ಕಂಬಗಳು ಅವುಗಳ ವೇಗವನ್ನು ನಿಯಂತ್ರಿಸುತ್ತವೆ. ಪ್ರತಿ ಕಂಬವು 500 ಟನ್‌ಗಳಿಗಿಂತ ಹೆಚ್ಚು ತೂಕ ಹೊಂದಿವೆ. ಎಲ್ಲಾ ಪ್ರವಾಹದ ನೀರು ಕೊನೆಗೆ ಸ್ಥಳೀಯ ನದಿಯಲ್ಲಿ ವಿಲೀನಗೊಳ್ಳುತ್ತದೆ. ಈ ಸುರಂಗ ನಿರ್ಮಾಣಕ್ಕೆ 14,285 ಕೋಟಿ ರೂ. ವೆಚ್ಚವಾಗಿದ್ದು, ಪ್ರವಾಹದ ಹಾನಿಯನ್ನು ಕಡಿಮೆ ಮಾಡುವ ಮೂಲಕ ಕಳೆದ 18 ವರ್ಷಗಳಲ್ಲಿ 1.26 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಉಳಿಸಲಾಗಿದೆ. ಪ್ರತಿ ವರ್ಷ 50 ಸಾವಿರ ಪ್ರವಾಸಿಗರು ಈ ಸುರಂಗವನ್ನು ನೋಡಲು ಬರುತ್ತಾರೆಂದು ಅಲ್ಲಿನ ಅಧಿಕಾರಿಗಳು ತಮ್ಮ ಮುಂದೆ ಹೇಳಿಕೊಂಡಿರುವುದಾಗಿ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.
ಪ್ರವಾಹ ಹತ್ತಿಕ್ಕಲು ರಸ್ತೆಗಳ ಕೆಳಗೆ ಸುರಂಗ ಕೊರೆದರೆ, ಭವಿಷ್ಯದಲ್ಲಿ ವಾಹನಗಳಿಗೆ ಅಂಡರ್‌ಪಾಸ್ ಮತ್ತು ಇತರ ಕಾಮಗಾರಿಗಳನ್ನು ನಡೆಸುವುದು ಕಷ್ಟವೆಂದು ಜಪಾನ್ ಎಂಜಿನಿಯರ್‌ಗಳು ಮೊದಲೇ ಯೋಚಿಸಿದ್ದರು. ಹಾಗಾಗಬಾರದು ಎಂಬ ಕಾರಣಕ್ಕಾಗಿ 50 ಮೀಟರ್ ಕೆಳಗೆ ಸುರಂಗಗ ನಿರ್ಮಿಸಿದ್ದಾರೆ. ಅವುಗಳು ಭರ್ತಿಯಾದರೆ ಮೋಟಾರ್‌ಗಳ ಮೂಲಕ ನೀರನ್ನು ನದಿ ಅಥವಾ ಸಮುದ್ರಕ್ಕೆ ಎತ್ತುವ ವ್ಯವಸ್ಥೆ ಕೂಡ ಇದೆ. ಇತ್ತೀಚಿಗೆ ಹೈದರಾಬಾದ್‌ನಲ್ಲೂ ಈ ರೀತಿಯ ತಂತ್ರಜ್ಞಾನದ ನಿರ್ಮಾಣಕ್ಕೆ ಕೈ ಹಾಕಿದ್ದೇವೆ. ರಸ್ತೆಗಳಲ್ಲಿ ಸಂಗ್ರಹವಾಗುವ ಹಾಗೂ ಪ್ರವಾಹ ನಿಯಂತ್ರಣಕ್ಕಾಗಿ ನಾವು 5 ಲಕ್ಷ ಲೀಟರ್ ನೀರನ್ನು ಸಂಗ್ರಹಿಸಬಹುದಾದ ಭೂ ಜಲಾಶಯ ನಿರ್ಮಿಸುವ ಆಲೋಚನೆಗೆ ಮುಂದಾಗಿದ್ದೆವು. ಆದರೆ, ಟೋಕಿಯೋದಲ್ಲಿನ ಎಂಜಿನಿಯರ್‌ಗಳು ತಂತ್ರಜ್ಞಾನವನ್ನು ಬಳಸಿಕೊಂಡ ರೀತಿ ಕಂಡು ಇನ್ನೂ ದೊಡ್ಡ ಟ್ಯಾಂಕ್‌ಗಳನ್ನು ನಿರ್ಮಿಸಬಹುದು ಎಂಬ ಆಲೋಚನೆಗೆ ಬಂದಿದ್ದೇವೆ ಎಂದು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯ ಎಂಜಿನಿಯರ್ ಕೋಟೇಶ್ವರ ರಾವ್ ಭವಿಷ್ಯದ ಟನಲ್ ಕುರಿತು ಮಾಹಿತಿ ನೀಡಿದ್ದಾರೆ.
ಟೋಕಿಯೋ ಯೋಜನೆಯ ಆಕಾರ:
- ಸುರಂಗದ ಉದ್ದ : 6.3 ಕಿ.ಮೀ.
- ಆಳ : ನೆಲದ ಕೆಳಗೆ 50 ಮೀಟರ್
- ಅಗಲ : 10 ಮೀಟರ್
- ಎತ್ತರ : 18 ಮೀಟರ್
- ವೆಚ್ಚ : 14,285 ಕೋಟಿ ರೂ. ($1.7 ಬಿಲಿಯನ್)
- ಕಾಮಗಾರಿ ಪೂರ್ಣಗೊಂಡ ವರ್ಷ : 2006
ಇದನ್ನೂ ಓದಿ: ಇಂದು ಅಂತಾರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ದಿನ: ಇದರ ಮಹತ್ವ ಏನ್ ಗೊತ್ತಾ?