ಗಾಂಧಿನಗರ: ಗಾಂಧಿನಗರ ಬಿಜೆಪಿ ಅಭ್ಯರ್ಥಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಮನ್ಭಾಯ್ ಪಟೇಲ್ ವಿರುದ್ಧ 3.4 ಲಕ್ಷ ಮತಗಳಿಂದ ಬಿಜೆಪಿ ಚಾಣಕ್ಯ ಜಯಭೇರಿಸಿ ಬಾರಿಸಿದ್ದಾರೆ.
ಅಮಿತ್ ಶಾ 4,73,348 ಮತ ಗಳಿಸಿದರೆ, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಮನ್ಭಾಯ್ ಪಟೇಲ್ 1,01,887 ಮತ ಪಡೆದರು. ಗಾಂಧಿನಗರದಿಂದ ಸತತವಾಗಿ ಎರಡನೇ ಬಾರಿ ಸ್ಪರ್ಧಿಸಿದ್ದ ಅಮಿತ್ ಶಾ ಅನಾಯಾಸವಾಗಿ ಗೆಲುವು ದಾಖಲಿಸಿದ್ದಾರೆ.
ವಾಜಪೇಯಿ, ಅಡ್ವಾಣಿ ಕ್ಷೇತ್ರ: 1989 ರಿಂದ ಗಾಂಧಿನಗರ ಬಿಜೆಪಿ ಕೋಟೆಯಾಗಿದೆ. ಈ ಮೊದಲು ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅಡ್ವಾಣಿ ಅವರು ಈ ಕ್ಷೇತ್ರದಿಂದ 6 ಬಾರಿ ಗೆದ್ದಿದ್ದರು. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃತಿಭಾಯ್ ಪಟೇಲ್ ಅವರನ್ನು ಅಡ್ವಾಣಿ ಅವರು 4.83 ಮತಗಳ ಅಂತರದಿಂದ ಸೋಲಿಸಿದ್ದರು. 2019ರಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದ ಬಳಿಕ ಮೊದಲ ಬಾರಿಗೆ ಗಾಂಧಿನಗರದಿಂದ ಅಮಿತ್ ಶಾ ಕಣಕ್ಕೆ ಇಳಿದಿದ್ದರು. 2019ರಲ್ಲಿ ಅಮಿತ್ ಶಾ ದಾಖಲೆಯ 5.57 ಲಕ್ಷ ಮತಗಳಿಂದ ಗೆಲುವಿನ ಹಾರ ಕೊರಳೇರಿಸಿಕೊಂಡಿದ್ದರು.
ದೇಶದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಗಾಂಧಿನಗರ ಕೂಡ ಒಂದಾಗಿದ್ದು, ಮೇ7 ರಂದು ಮತದಾನ ನಡೆದಿತ್ತು. ಶೇ.59.80 ರಷ್ಟು ಮಾತ್ರ ಮತದಾನವಾಗಿತ್ತು. ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ನಾಮಪತ್ರ ತಿರಸ್ಕೃತವಾಗಿದ್ದರಿಂದ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಗೆಲುವು ಸಾಧಿಸಿದ್ದರು.
ದೇಶಾದ್ಯಂತ ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಸುಳ್ಳು ಮಾಡಿ, 200ರ ಗಡಿ ದಾಟಿದೆ. ಗುಜರಾತ್ 26 ಕ್ಷೇತ್ರಗಳಲ್ಲಿ 24ರಲ್ಲಿ ಕಮಲ ಮುನ್ನಡೆಯಲ್ಲಿದೆ. ಎರಡಲ್ಲಿ ಕಾಂಗ್ರೆಸ್ ಮುಂದಿದೆ.