ಚಂಡೀಗಢ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಏತನ್ಮಧ್ಯೆ, ಹರಿಯಾಣ ಸರ್ಕಾರವು ಪಂಜಾಬ್ ನ ಶಂಭು, ಖನೂರಿ ಅಥವಾ ಡಬ್ವಾಲಿ ಗಡಿಗಳಲ್ಲಿ ರೈತರನ್ನು ತಡೆದಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಅನೇಕ ಬಾರಿ ಸಂಘರ್ಷ ಏರ್ಪಟ್ಟಿದೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಅನೇಕ ಕಡೆಗಳಲ್ಲಿ ಅಶ್ರುವಾಯು ಬಳಸಿದ್ದಾರೆ. ಇದರಿಂದ ಅನೇಕ ರೈತರು ಗಾಯಗೊಂಡಿದ್ದು, ಇತ್ತೀಚೆಗೆ ಶುಭಕರನ್ ಸಿಂಗ್ ಹೆಸರಿನ ಯುವ ರೈತನೊಬ್ಬ ಪ್ರಾಣ ಕಳೆದುಕೊಂಡರು. ಏತನ್ಮಧ್ಯೆ, ಖನೂರಿ ಗಡಿಯಲ್ಲಿರುವ ರೈತ ದರ್ಶನ್ ಸಿಂಗ್ ಅವರ ಆರೋಗ್ಯವು ಅಶ್ರುವಾಯುನಿಂದಾಗಿ ಹದಗೆಟ್ಟ ನಂತರ, ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದಿದೆ.
ಈ ಸಂಬಂಧ ಬಂದ ಮಾಹಿತಿಯ ಪ್ರಕಾರ, ಬಟಿಂಡಾ ಜಿಲ್ಲೆಯ ಅಮರಗಢ ಗ್ರಾಮದ ಬಳಿಯ ಗೋನೆಯಾನದ ರೈತ ದರ್ಶನ್ ಸಿಂಗ್ ಖನೂರಿ ಗಡಿಯಲ್ಲಿ ತಡರಾತ್ರಿ ಪ್ರತಿಭಟನೆಯ ಸಮಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ರೈತ ದರ್ಶನ್ ಸಿಂಗ್ ಅವರಿಗೆ ಸುಮಾರು 62 ವರ್ಷ ವಯಸ್ಸಾಗಿತ್ತು. ಮಾಹಿತಿಯ ಪ್ರಕಾರ, ರೈತ ಮೊದಲ ದಿನದಿಂದ ಖನೂರಿ ಗಡಿಯಲ್ಲಿ ಸಿಲುಕಿಕೊಂಡಿದ್ದರು. ಏತನ್ಮಧ್ಯೆ, ಹರಿಯಾಣ ಪೊಲೀಸರು ಹಾರಿಸಿದ ಅಶ್ರುವಾಯು ಶೆಲ್ಗಳಿಂದಾಗಿ ರೈತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಅಶ್ರುವಾಯು ಪ್ರಯೋಗದ ನಂತರ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಪಥರ್ಗೆ ಕರೆದೊಯ್ಯಲಾಯಿತು ಎಂದು ಹೇಳಲಾಗಿದೆ. ಅಲ್ಲಿಂದ ಅವರನ್ನು ಸರ್ಕಾರಿ ರಾಜೀಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಅವರು ನಿಧನರಾದರು.
ಮೃತ ರೈತನು ಮಗ, ಮಗಳು ಮತ್ತು ಹೆಂಡತಿಯನ್ನು ಅಗಲಿದ್ದಾರೆ ಎಂಬ ಮಾಹಿತಿ ಬಂದಿದೆ. ಮೃತ ರೈತನ ಮಗನಿಗೆ ಕೇವಲ 15 ದಿನಗಳ ಹಿಂದೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ಎಂಟು ಎಕರೆ ಭೂಮಿಯ ಮಾಲೀಕರಾದ ಮೃತ ರೈತ ದರ್ಶನ್ ಸಿಂಗ್ 8 ಲಕ್ಷ ರೂಪಾಯಿಗಳ ಸಾಲ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತ ರೈತನ ಕುಟುಂಬಕ್ಕೆ ಸರ್ಕಾರ ಸಹಾಯಹಸ್ತ ಚಾಚಬೇಕೆಂದು ರೈತ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರೈತರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ಬದರ್ ಪುರ್, ಪಲ್ಲಾ, ಸೂರಜ್ ಕುಂಡ್ ಮತ್ತು ಕರ್ಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ ವಾಹನಗಳ ಪರಿಶೀಲನೆ ಪ್ರಾರಂಭಿಸಿದ್ದಾರೆ. ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ಭಾರಿ ಸಂಚಾರ ದಟ್ಟಣೆ ಮುಂದುವರೆದಿದೆ. ವಾಹನ ಸಂಚಾರಕ್ಕೆ ಪೊಲೀಸರು ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ಡಿಎನ್ ಡಿ ಫ್ಲೈವೇ ಮತ್ತು ಕಾಳಿಂದಿ ಕುಂಜ್ನಂತಹ ಗಡಿ ಸ್ಥಳಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನೂ ಓದಿ : ಭೀಕರ ಅಪಘಾತದಲ್ಲಿ ಯುವ ಶಾಸಕಿ ಲಾಸ್ಯ ನಂದಿತಾ ಸಾವು: ಸಿಎಂ, ಬಿಆರ್‌ಎಸ್ ನಾಯಕರು ಸೇರಿ ಹಲವರಿಂದ ಸಂತಾಪ
ಕೆಲವೇ ಗಂಟೆಗಳಲ್ಲಿ ಹೇಳಿಕೆ ವಾಪಸ್ ಪಡೆದ ಪೊಲೀಸರು: ಈ ನಡುವೆ ಹರ್ಯಾಣ ಪೊಲೀಸರು ಇಂದು ಮುಂಜಾನೆ ಆದೇಶ ಹೊರಡಿಸಿದ್ದು, ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿಗೆ ನಷ್ಟವಾದರೆ, ಸಂಬಂಧಪಟ್ಟ ಪ್ರತಿಭಟನಾಕಾರರಿಂದ ನಷ್ಟ ವಸೂಲಿ ಮಾಡಲಾಗುವುದು. ಹಾಗೂ ಪ್ರತಿಭಟನಾಕಾರರ ಮೇಲೆ ಎನ್‌ಎಸ್‌ಎ ವಿಧಿಸಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದ್ದರು. ಆದರೆ ಈ ಹೇಳಿಕೆ ನೀಡಿದ ಕೆಲವು ಗಂಟೆಗಳ ನಂತರ, ಹರಿಯಾಣ ಪೊಲೀಸರು ರೈತ ಮುಖಂಡರ ಮೇಲೆ ಎನ್ಎಸ್ಎ ವಿಧಿಸುವ ಮೊದಲ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಈ ಹಿಂದೆ ಹಾಕಿದ್ದ ಪೋಸ್ಟ್ ಅನ್ನು ಪೊಲೀಸರು ಡಿಲೀಟ್ ಮಾಡಿದ್ದಾರೆ. ರೈತ ಮುಖಂಡರ ಮೇಲೆ ಎನ್ ಎಸ್ ಎ ಹೇರುವುದಿಲ್ಲ ಎಂದು ಹರಿಯಾಣ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ನಿಬಂಧನೆಗಳ ಅಡಿಯಲ್ಲಿ ರೈತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಂಬಾಲಾ ರೇಂಜ್ ಐಜಿ ಸಿಬಾಶ್ ಕಬಿರಾಜ್ ಹೇಳಿದ್ದಾರೆ.