ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ಸಂಸದ ಓಂ ಬಿರ್ಲಾ ನಾಮಪತ್ರ ಸಲ್ಲಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದಿಂದ ಓಂ ಬಿರ್ಲಾ, ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಈ ಬಾರಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಮ್ಮತ ಮೂಡಿಸಿ, ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದ್ದರು. ಆದರೆ, ಪ್ರತಿಪಕ್ಷಗಳು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧೆ ಮಾಡಲು ನಿರ್ಧರಿಸಿದ್ದರಿಂದ ಕಾಂಗ್ರೆಸ್ನಿಂದ ಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಕೆ.ಸುರೇಶ್ ಪ್ರತಿಕ್ರಿಯೆ: ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಸಂಸದ ಕೆ.ಸುರೇಶ್ ಅವರು, ''ಬಿಜೆಪಿಯು ಸ್ವೀಕರ್ ಸ್ಥಾನಕ್ಕೆ ಒಮ್ಮತಕ್ಕೆ ಬರಲು ಯಾವುದೇ ಉಪಕ್ರಮವನ್ನು ಕೈಗೊಂಡಿಲ್ಲ. ಸಭಾಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು. ಸದನದ ಸಂಪ್ರದಾಯದ ಪ್ರಕಾರ ಸ್ಪೀಕರ್ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಆದರೆ, ಬಿಜೆಪಿಯು ಪ್ರತಿಪಕ್ಷಗಳ ಜತೆ ಚರ್ಚೆ ನಡೆಸುತ್ತಿಲ್ಲ. ಒಮ್ಮತಕ್ಕೆ ಮುಂದಾಗಬೇಕು. ಇಲ್ಲಿಯವರೆಗೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸ್ಪೀಕರ್ ಸ್ಥಾನಕ್ಕೆ ಒಮ್ಮತಕ್ಕೆ ಬರಲು ಉಪಕ್ರಮವೆಂದರೆ, ಉಪಸಭಾಪತಿ ಸ್ಥಾನ ವಿರೋಧ ಪಕ್ಷಕ್ಕೆ ನೀಡಬೇಕು'' ಎಂದು ಕೆ. ಸುರೇಶ್ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಇದೀಗ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿದ್ದಾರೆ.
ಇಂಡಿಯಾ ಒಕ್ಕೂಟದಿಂದ ತನ್ನ ಅಭ್ಯರ್ಥಿಯನ್ನು ಘೋಷಿಸಿರುವ ಹಿನ್ನೆಲೆ, ಕೆಳಮನೆಯ ಸ್ಪೀಕರ್‌ಗೆ ಚುನಾವಣೆ ನಡೆಯುವುದು ಇದೇ ಮೊದಲು. ಲೋಕಸಭೆಯ ಸ್ಪೀಕರ್ ಮತ್ತು ಉಪಸಭಾಪತಿಯ ಆಯ್ಕೆ ಸಂಬಂಧ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣಕ್ಕೆ ಎರಡು ಬಣದಿಂದ ಪ್ರತ್ಯೇಕವಾಗಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
ಜೂನ್ 26 ರಂದು ಲೋಕಸಭೆಯ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜೂನ್ 27 ರಂದು ಅಧ್ಯಕ್ಷ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 543 ಸದಸ್ಯರ ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 293 ಸಂಸದರನ್ನು ಹೊಂದಿದ್ದು, ವಿರೋಧ ಪಕ್ಷವಾದ ಇಂಡಿಯಾ ಒಕ್ಕೂಟ 234 ಸಂಸದರ ಬಲ ಇದೆ.
ಇದನ್ನೂ ಓದಿ: ರಾಜ್ಯಸಭೆ ಸಭಾನಾಯಕರಾಗಿ ಕೇಂದ್ರ ಸಚಿವ ಜೆ.ಪಿ.ನಡ್ಡಾ ನೇಮಕ - J P Nadda