ರಾಂಚಿ (ಜಾರ್ಖಂಡ್) : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ರನ್ನು ಜಾರಿ ನಿರ್ದೇಶನಾಲಯ (ಇಡಿ) 7 ತಾಸುಗಳ ವಿಚಾರಣೆಯ ಬಳಿಕ ಬುಧವಾರ ರಾತ್ರಿ ಬಂಧಿಸಿದೆ. ಇನ್ನೊಂದು ಬೆಳವಣಿಗೆಯಲ್ಲಿ ಸೊರೆನ್ ರಾಜೀನಾಮೆ ನೀಡಲಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಜೆಎಂಎಂನ ಹಿರಿಯ ನಾಯಕ ಚಂಪೈ ಸೊರೆನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಕೋಟ್ಯಂತರ ರೂಪಾಯಿ ಬೆಲೆಬಾಳುವ ಭಾರತೀಯ ಸೇನೆಗೆ ಸೇರಿದ ಭೂಮಿಯನ್ನು ಕಬಳಿಕೆ ಮಾಡಿದ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ನಾಯಕ, ಸಿಎಂ ಹೇಮಂತ್ ಸೊರೆನ್ ವಿಚಾರಣೆಗೆ ಹಾಜರಾಗಲು ಸೂಚಿಸಿ ಜಾರಿ ನಿರ್ದೇಶನಾಲಯ ಹತ್ತು ಬಾರಿ ಸಮನ್ಸ್ ನೀಡಿತ್ತು. ಪ್ರತಿ ಬಾರಿಯೂ ವಿಚಾರಣೆ ಗೈರಾಗಿದ್ದ ಸೊರೆನ್ ಕೊನೆಗೂ ಇಂದು 1 ಗಂಟೆಗೆ ಇಡಿ ಅಧಿಕಾರಿಗಳ ಮುಂದೆ ವಿಚಾರಣೆ ಒಳಗಾಗಿದ್ದರು.
ಸತತ 7 ಗಂಟೆಗಳಿಂದ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿಗೆ ಸಿಎಂ ಸಮಾಧಾನಕರ ಉತ್ತರ ನೀಡಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಸೊರೆನ್ರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಜಿ ಅಖಿಲೇಶ್ ಝಾ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸಿಎಂ ನಿವಾಸದಲ್ಲಿ ಬೀಡು ಬಿಟ್ಟಿದ್ದಾರೆ. ಜೊತೆಗೆ ಡಿಸಿ, ಎಸ್‌ಎಸ್‌ಪಿ ಕೂಡ ಇದ್ದರು. ರಾಂಚಿ ಸೇರಿದಂತೆ ಇಡೀ ರಾಜ್ಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇದಕ್ಕೂ ಮೊದಲು ರಾಜ್ಯಪಾಲರನ್ನು ಭೇಟಿ ಮಾಡಲು ಸಿಎಂ ಹೇಮಂತ್ ಸೊರೆನ್ ಸಮಯ ಕೋರಿದ್ದರು. ಜೆಎಂಎಂ ನೇತೃತ್ವದ ಮೈತ್ರಿಕೂಟವು ಎಲ್ಲ ಶಾಸಕರಿಗೆ ರಾಂಚಿಯಲ್ಲಿ ಉಳಿಯಲು ಸೂಚನೆ ಕೂಡ ನೀಡಲಾಗಿತ್ತು.
ನಿನ್ನೆಯಷ್ಟೇ ಮುಖ್ಯಮಂತ್ರಿಯ ದೆಹಲಿ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಆದರೆ, ಅಲ್ಲಿ ಸಿಎಂ ಪತ್ತೆಯಾಗಿರಲಿಲ್ಲ. ಬಿಎಂಡಬ್ಲ್ಯು ಕಾರು ಮತ್ತು 36 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದೆ. ಇದರ ಬೆನ್ನಲ್ಲೇ 30 ಗಂಟೆಗಳ ಕಾಲ ನಾಪತ್ತೆಯಾಗಿದ್ದ ಸಿಎಂ ಸೊರೆನ್ ರಾಂಚಿಗೆ ಆಗಮಿಸಿ ಶಾಸಕರ ಜೊತೆ ಸಭೆ ನಡೆಸಿದ್ದರು.
ಹೊಸ ಸಿಎಂ ಘೋಷಣೆ: ಜಾರ್ಖಂಡ್‌ನ ರಾಜಕೀಯ ಬಿಕ್ಕಟ್ಟು ತಿರುವು ಪಡೆದುಕೊಂಡಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೆನ್ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಪಾಲರ ಭೇಟಿಗೆ ಸಮಯ ಕೇಳಲಾಗಿದ್ದು, ಇಂದು ರಾತ್ರಿ 8:50 ಕ್ಕೆ ಅವಕಾಶ ನೀಡಲಾಗಿದೆ. ರಾಜೀನಾಮೆ ನೀಡಿದ ಬಳಿಕ ಇಡಿ ತಂಡ ಸಿಎಂರನ್ನು ಕಸ್ಟಡಿಗೆ ತೆಗೆದುಕೊಳ್ಳಲಿದೆ.
ಸಿಎಂ ರಾಜೀನಾಮೆ ನೀಡುವ ಹಿನ್ನೆಲೆಯಲ್ಲಿ ಜೆಎಂಎಂನ ಹಿರಿಯ ನಾಯಕ ಚಂಪೈ ಸೊರೆನ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಹೇಮಂತ್ ಸೋರೆನ್ ರಾಜೀನಾಮೆ ನಂತರ, ಚಂಪೈ ಸೊರೆನ್ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ. ಮುಂದಿನ ಆದೇಶದವರೆಗೆ ರಾಂಚಿಯಲ್ಲಿನ ಮುಖ್ಯಮಂತ್ರಿ ನಿವಾಸ, ರಾಜಭವನ, ಇಡಿ ಕಚೇರಿ ಬಳಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ಪಶ್ಚಿಮಬಂಗಾಳದಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ: ಟಿಎಂಸಿ ವಿರುದ್ಧ ಆರೋಪ
ಉದ್ಯೋಗಕ್ಕಾಗಿ ಭೂಮಿ ಹಗರಣ: ತೇಜಸ್ವಿ ಯಾದವರನ್ನ 4 ಗಂಟೆ ವಿಚಾರಣೆ ನಡೆಸಿದ ಇಡಿ