ನವದೆಹಲಿ: ಹೃದ್ರೋಗದಿಂದ ಬಳಲುತ್ತಿದ್ದ ಶ್ವಾನಕ್ಕೆ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಯಶಸ್ವಿಯಾಗಿದೆ. ಇಂತಹ ಅಪರೂಪದ ಚಿಕಿತ್ಸೆ ನಡೆದಿದ್ದು ದೇಶ ಮತ್ತು ಏಷ್ಯಾದಲ್ಲೇ ಮೊದಲಾಗಿದೆ. ಶ್ವಾನ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ.
ಏಳು ವರ್ಷದ ಬೀಗಲ್ ಜೂಲಿಯೆಟ್ ಎಂಬ ಸಾಕು ನಾಯಿ ಕಳೆದ ಎರಡು ವರ್ಷಗಳಿಂದ ಮಿಟ್ರಲ್ ವಾಲ್ವ್ (ಹೃದಯ ಸಂಬಂಧಿ ಕಾಯಿಲೆ) ನಿಂದ ಬಳಲುತ್ತಿತ್ತು. ರಕ್ತ ಪರಿಚಲನೆಯಲ್ಲಿ ಸಮಸ್ಯೆಯಾಗಿ ಅನಾರೋಗ್ಯಕ್ಕೀಡಾಗಿತ್ತು. ಪ್ರೀತಿಯಿಂದ ಸಾಕಿದ ಶ್ವಾನ ಅನಾರೋಗ್ಯದಿಂದ ಬಳಲುತ್ತಿರುವುದು ಮಾಲೀಕರನ್ನು ಚಿಂತೆಗೀಡು ಮಾಡಿತ್ತು.
ಇಲ್ಲಿನ ಮ್ಯಾಕ್ಸ್ ಪೆಟ್‌ಜೆಡ್ ಆಸ್ಪತ್ರೆಗೆ ಆ ಶ್ವಾನವನ್ನು ಮಾಲೀಕರು ಕರೆತಂದಿದ್ದು, ಪ್ರಾಣಿಗಳ ಹೃದ್ರೋಗ ತಜ್ಞರಾದ ಡಾ.ಭಾನು ದೇವ್ಶರ್ಮಾ ಅವರು ತಪಾಸಣೆ ನಡೆಸಿದ್ದಾರೆ. ಕಠಿಣ ಮತ್ತು ತೀರಾ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ಅವರು ಮಾಲೀಕರ ಜೊತೆ ಮಾತನಾಡಿದ್ದಾರೆ. ಅದರಂತೆ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಏನಿದು ಮಿಟ್ರಲ್ ವಾಲ್ವ್ ಸಮಸ್ಯೆ?: ಇದು ಹೃದಯ ಸಂಬಂಧಿ ಕಾಯಿಲೆಯಾಗಿದ್ದು, ರಕ್ತನಾಳಗಳಲ್ಲಿ ಉಂಟಾಗುವ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ ಹೃದಯದ ಎಡ ಮೇಲ್ಭಾಗದ ಕೋಣೆಯೊಳಗೆ ರಕ್ತದ ಹಿಮ್ಮುಖ ರಿವು ನಿಂತು, ರಕ್ತ ಹೆಪ್ಪುಗಟ್ಟಿ ಹೃದಯ ಸ್ಥಂಭನ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿದ್ದ ಶ್ವಾನವನ್ನು ಪಶು ವೈದ್ಯರು ತಪಾಸಣೆ ನಡೆಸಿ ಮೇ 30 ರಂದು ಟ್ರಾನ್ಸ್‌ಕ್ಯಾಥೆಟರ್ ಎಡ್ಜ್ ಟು ಎಡ್ಜ್ ರಿಪೇರಿ (TEER) ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದನ್ನು ಹೈಬ್ರಿಡ್ ಶಸ್ತ್ರಚಿಕಿತ್ಸೆ ಎಂದೂ ಕೂಡ ಕರೆಯಲಾಗುತ್ತದೆ. ಕಾರಣ ಇದು ಸೂಕ್ಷ್ಮ ಶಸ್ತ್ರಚಿಕಿತ್ಸೆಯಾದ ಬೈಪಾಸ್ ಸರ್ಜರಿಯಂತೆ ನಡೆಸಲಾಗುವುದಿಲ್ಲ.
ಡಾ.ಭಾನು ದೇವ್ಶರ್ಮಾ ಅವರು ಈ ವಿಧಾನದ ಶಸ್ತ್ರಚಿಕಿತ್ಸೆಯನ್ನು ಅಮೆರಿಕದಲ್ಲಿ ಕಲಿತಿದ್ದಾರೆ. ಸರ್ಜರಿ ಮಾಡಿದ ಎರಡು ದಿನಗಳ ನಂತರ ಸಾಕು ನಾಯಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮಿಟ್ರಲ್ ವಾಲ್ವ್ ಕಾಯಿಲೆಯು ದೇಶದಲ್ಲದೇ, ವಿಶ್ವದ ಯಾವುದೇ ಭಾಗದಲ್ಲಿರುವ ನಾಯಿಗಳಿಗೆ ಕಾಡುವ ಅಪಾಯಕಾರಿ ರೋಗವಾಗಿದೆ. ಇದು ವಿಶ್ವಾದ್ಯಂತ ನಾಯಿಗಳಲ್ಲಿ ಶೇಕಡಾ 80 ರಷ್ಟು ಅಪಾಯಕ್ಕೆ ಕಾರಣವಾಗಿದೆ. ಇದು ನಾಯಿಗಳ ಸಾವಿಗೆ ಪ್ರಮುಖ ಕಾರಣವೂ ಹೌದು ಎನ್ನುತ್ತಾರೆ ವೈದ್ಯ ಶರ್ಮಾ.
ಪಶುವೈದ್ಯಕೀಯ ಆಸ್ಪತ್ರೆಯ ಪ್ರಕಾರ, ಡಾ.ಶರ್ಮಾ ಅವರ ತಂಡವು ನಡೆಸಿದ ಈ ಶಸ್ತ್ರಚಿಕಿತ್ಸೆ ಏಷ್ಯಾದಲ್ಲೇ ಮೊದಲನೆಯದು ಮತ್ತು ಖಾಸಗಿ ವೈದ್ಯರು ನಡೆಸಿದ ವಿಶ್ವದ ಎರಡನೇ ಶಸ್ತ್ರಚಿಕಿತ್ಸೆಯಾಗಿದೆ. ಇದಕ್ಕೂ ಮೊದಲು ಶಾಂಘೈನಲ್ಲಿ ನಾಲ್ವರು ವೈದ್ಯರ ತಂಡ ಇಂಥದ್ದೇ ಶಸ್ತ್ರಚಿಕಿತ್ಸೆ ನಡೆಸಿದ್ದರು.
ಇದನ್ನೂ ಓದಿ: ಕೇರಂ ಆಡುತ್ತಿದ್ದ ಬಿಜೆಪಿ ಕಾರ್ಯಕರ್ತನಿಗೆ ಗುಂಡಿಕ್ಕಿ ಹತ್ಯೆಗೈದು ಶಿರಚ್ಛೇದನ - Bengal BJP Worker Shot