ಚೆನ್ನೈ : ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಸಿಂಹಪಾಲನ್ನು ಗೆಲ್ಲಲಿವೆ ಎಂದು ಆರಂಭಿಕ ಟ್ರೆಂಡ್ಗಳು ಸುಳಿವು ನೀಡಿವೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಪಕ್ಷದ ಸ್ಟಾರ್ ಅಭ್ಯರ್ಥಿಗಳಾದ ಕನಿಮೋಳಿ (ತೂತುಕುಡಿ), ಟಿ.ಆರ್.ಬಾಲು (ಶ್ರೀಪೆರಂಬುದೂರ್), ದಯಾನಿಧಿ ಮಾರನ್ (ಸೆಂಟ್ರಲ್ ಚೆನ್ನೈ), ತಮಿಳಚಿ ತಂಗಪಾಂಡಿಯನ್ (ದಕ್ಷಿಣ ಚೆನ್ನೈ) ತಮ್ಮ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭವಾದಾಗ ತಮಿಳುನಾಡಿನಾದ್ಯಂತ ಹಲವಾರು ಕ್ಷೇತ್ರಗಳಲ್ಲಿ ಡಿಎಂಕೆ ಆರಂಭಿಕ ಮುನ್ನಡೆ ಸಾಧಿಸಿದೆ. ನಂತರ ಬೆಳಗ್ಗೆ 8.30 ರಿಂದ ಬೆಳಗ್ಗೆ 8.30 ರ ನಡುವೆ ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಂಡ ನಂತರ ಇವಿಎಂ ಮತಗಳ ಎಣಿಕೆಯನ್ನು ಕೈಗೆತ್ತಿಕೊಂಡಾಗ ಕೂಡ ತಮಿಳುನಾಡಿನಾದ್ಯಂತ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳೇ ಆರಂಭಿಕ ಮುನ್ನಡೆ ಸಾಧಿಸಿವೆ.
ಕಾಂಗ್ರೆಸ್ ಪಕ್ಷದ ಕಾರ್ತಿ ಚಿದಂಬರಂ (ಶಿವಗಂಗಾ) ಮತ್ತು ಮಾರ್ಕ್ಸ್ವಾದಿ ಪಕ್ಷದ ಅಭ್ಯರ್ಥಿ ಸು ವೆಂಕಟೇಶನ್ (ಮಧುರೈ) ಸೇರಿದಂತೆ ಡಿಎಂಕೆಯ ಮಿತ್ರಪಕ್ಷಗಳ ಅಭ್ಯರ್ಥಿಗಳು ತಮ್ಮ ಎದುರಾಳಿಗಿಂತ ಅಲ್ಪ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಅಣ್ಣಾಮಲೈ (ಕೊಯಮತ್ತೂರು), ಎಲ್ ಮುರುಗನ್ (ನೀಲಗಿರಿ), ನೈನಾರ್ ನಾಗೇಂದ್ರನ್ (ತಿರುನೆಲ್ವೇಲಿ), ಪಿಎಂಕೆಯ ಸ್ಟಾರ್ ಅಭ್ಯರ್ಥಿ ಸೌಮ್ಯ ಅನ್ಬುಮಣಿ (ಧರ್ಮಪುರಿ), ಎಐಎಡಿಎಂಕೆಯ ಆತ್ರಾಲ್ ಅಶೋಕ್ ಕುಮಾರ್ (ಈರೋಡ್) ಪೈಪೋಟಿಯ ಹೋರಾಟ ನಡೆಸುತ್ತಿದ್ದಾರೆ.
ತಮಿಳುನಾಡಿನ 39 ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ನಡೆದ ಲೋಕಸಭಾ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ರಾಜ್ಯಾದ್ಯಂತ ಪ್ರಾರಂಭವಾಯಿತು. 39 ಲೋಕಸಭಾ ಕ್ಷೇತ್ರಗಳಲ್ಲಿ 950 ಅಭ್ಯರ್ಥಿಗಳು ಕಣದಲ್ಲಿದ್ದು, ಒಂದೇ ಹಂತದ ಚುನಾವಣೆಯಲ್ಲಿ ಶೇ 69.72 ರಷ್ಟು ಮತದಾನವಾಗಿದೆ.
ಇದನ್ನೂ ಓದಿ : ವಿಧಾನಸಭೆ ಚುನಾವಣೆ ಫಲಿತಾಂಶ: ಆಂಧ್ರದಲ್ಲಿ ಟಿಡಿಪಿ, ಒಡಿಶಾದಲ್ಲಿ ಬಿಜೆಪಿ ಮುನ್ನಡೆ; ಸುರಪುರದಲ್ಲಿ ಬಿಜೆಪಿ ಮೇಲುಗೈ - Andhra and odisha Assembly Results