ನವದೆಹಲಿ: ದಿಲ್ಲಿ ವಕ್ಫ್ ಮಂಡಳಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರ ನ್ಯಾಯಾಂಗ ಬಂಧನವನ್ನು ಇಲ್ಲಿನ ನ್ಯಾಯಾಲಯವು ಅಕ್ಟೋಬರ್ 7ರವರೆಗೆ ವಿಸ್ತರಿಸಿತು. ಶಾಸಕ ಖಾನ್ ತನ್ನ ವೈದ್ಯಕೀಯ ದಾಖಲೆಗಳನ್ನು ಜೈಲಿಗೆ ತೆಗೆದುಕೊಂಡು ಹೋಗಲು ರೂಸ್ ಅವೆನ್ಯೂ ನ್ಯಾಯಾಲಯ ಇದೇ ಸಂದರ್ಭದಲ್ಲಿ ಅನುಮತಿ ನೀಡಿದೆ.
ಇದಲ್ಲದೆ, ತಿಹಾರ್ ಜೈಲಿನಲ್ಲಿ ತನಗೆ ಎಲೆಕ್ಟ್ರಿಕ್ ಕೆಟಲ್ ಮತ್ತು ಗ್ಲೂಕೋಸ್ ಮಾನಿಟರಿಂಗ್ ಸಾಧನ ನೀಡಬೇಕೆಂದು ಕೋರಿ ಅಮಾನತುಲ್ಲಾ ಖಾನ್ ಸಲ್ಲಿಸಿದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಈ ಅರ್ಜಿಯ ಮುಂದಿನ ವಿಚಾರಣೆ ಸೆಪ್ಟೆಂಬರ್ 25ರಂದು ನಡೆಯಲಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಅಮಾನತುಲ್ಲಾ ಖಾನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಕಳೆದ ವಾರ ಇಡಿಗೆ ನೋಟಿಸ್ ನೀಡಿತ್ತು. ಈ ಪ್ರಕರಣದಲ್ಲಿ ಅಕ್ಟೋಬರ್ 18ರಂದು ವಿಚಾರಣೆಯನ್ನು ನಿಗದಿಪಡಿಸಿರುವ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ನ್ಯಾಯಪೀಠವು, ಖಾನ್ ಅವರ ಅರ್ಜಿಗೆ ಎರಡು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ಜಾರಿ ನಿರ್ದೇಶನಾಯಕ್ಕೆ ಸೂಚಿಸಿದೆ.
ಹಗರಣದ ಪ್ರಮುಖ ಆರೋಪಿ ಅಮಾನತುಲ್ಲಾ ಖಾನ್ ಅವರನ್ನು ಸೆಪ್ಟಂಬರ್ 2ರಂದು ಅವರ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಇಡಿ ಬಂಧಿಸಿತ್ತು. ಅವರ ಏಳು ದಿನಗಳ ಇಡಿ ಕಸ್ಟಡಿ ಸೆಪ್ಟೆಂಬರ್ 9ರಂದು ಕೊನೆಗೊಂಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಅವರನ್ನು ಈ ಹಿಂದೆ ಏಪ್ರಿಲ್ನಲ್ಲಿ ಕೂಡ ಇಡಿ ಬಂಧಿಸಿತ್ತು. ಆದರೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಈ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿತ್ತು.
ದೆಹಲಿ ವಕ್ಫ್ ಮಂಡಳಿಯಲ್ಲಿ ಅಕ್ರಮ ಸಿಬ್ಬಂದಿ ನೇಮಕಾತಿ ಮತ್ತು ನಂತರ ತಮ್ಮ ಸಹಚರರ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಲು ಹಣ ದುರುಪಯೋಗಪಡಿಸಿಕೊಂಡಿರುವ ಆರೋಪಗಳ ಬಗ್ಗೆ ಮುಖ್ಯವಾಗಿ ಇಡಿ ತನಿಖೆ ನಡೆಸುತ್ತಿದೆ. 2016ರ ನವೆಂಬರ್ನಲ್ಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಖಾನ್ ವಿರುದ್ಧ ದೂರು ದಾಖಲಾಗಿತ್ತು.
ಮಂಡಳಿಯ ವಿವಿಧ ಅನುಮೋದಿತ ಮತ್ತು ಅನುಮೋದಿತವಲ್ಲದ ಹುದ್ದೆಗಳಿಗೆ ಅವರು ಕಾನೂನುಬಾಹಿರವಾಗಿ ನೇಮಕಾತಿಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಮಗೆ ಬೇಕಾದವರನ್ನು ವಕ್ಫ್ ಮಂಡಳಿಯ ಹುದ್ದೆಗಳಿಗೆ ನೇಮಿಸುವ ಸಲುವಾಗಿ ಖಾನ್ ಉದ್ದೇಶಪೂರ್ವಕವಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದು ಸಿಬಿಐ ತನಿಖೆಯಲ್ಲಿ ಬಯಲಾಗಿತ್ತು. ಮೊದಲಿಗೆ ಸಿಬಿಐ ಈ ಕುರಿತು ತನಿಖೆ ಆರಂಭಿಸಿತ್ತು. ಆದರೆ ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದ ನಂತರ ಇಡಿ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಮುಂದುವರೆದ ರೈಲು ಹಳಿ ತಪ್ಪಿಸುವ ಸಂಚು; ಪಂಜಾಬ್ನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ಬಯಲು - ATTEMPT TO DERAIL A TRAIN