ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕುಸಿದಿದ್ದು, ಯಮುನಾ ನದಿಯಲ್ಲಿ ವಿಷಕಾರಿ ನೊರೆ ತೇಲುತ್ತಿರುವುದು ಕಂಡು ಬಂದಿದೆ. ಶುಕ್ರವಾರ ಬೆಳಗ್ಗೆ ಕಾಳಿಂದಿ ಕುಂಜ್ ಪ್ರದೇಶದಲ್ಲಿ ಯಮುನಾ ನದಿಯ ಮೇಲ್ಮೈಯಲ್ಲಿ ಭಾರಿ ಪ್ರಮಾಣದ ವಿಷಕಾರಿ ನೊರೆ ತೇಲುತ್ತಿರುವುದು ಕಂಡು ಬಂದಿದೆ.
ನದಿಯಲ್ಲಿ ವಿಷಯುಕ್ತ ನೊರೆ ಕಾಣಿಸಿಕೊಳ್ಳಲು ಅಕ್ಷರಶಃ ಮಿತಿಮೀರಿದ ಮಾಲಿನ್ಯವೇ ಕಾರಣ. ರಾಜಧಾನಿಯಲ್ಲಿ ಇಂದು ಬೆಳಗ್ಗೆ ವಾಯು ಗುಣಮಟ್ಟದ ಸೂಚ್ಯಂಕ (AQI) 292 ರಷ್ಟಿತ್ತು. ಎಲ್ಲವನ್ನು ನಿಯಂತ್ರಿಸಲಾಗುತ್ತದೆ ಎನ್ನುವ ಅರವಿಂದ್ ಕೇಜ್ರಿವಾಲ್, ಇದನ್ನೇಕೆ ನಿಯಂತ್ರಣ ಮಾಡುತ್ತಿಲ್ಲ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.
Delhi: Toxic foam seen floating on Yamuna River in Kalindi Kunj area
— ANI Digital (@ani_digital) October 18, 2024
Read @ANI Story | https://t.co/nBIs72p9Cn#Yamuna #toxicfoam #Delhi #airpollution #KalindiKunj pic.twitter.com/4LUkt0OPPv
''ಕಳೆದ 10 ವರ್ಷಗಳಿಂದ ದೆಹಲಿಯ ಆಡಳಿತ ನಡೆಸುತ್ತಿರುವ ಎಎಪಿ ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಪರಿಣಾಮ ವಾಯುಗುಣಮಟ್ಟ ದಿನೇ ದಿನೆ ಕುಸಿಯುತ್ತಿದೆ. ನದಿ ಮತ್ತು ಗಾಳಿಯಲ್ಲಿ ವಿಷ ತುಂಬಿದೆ. ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಕೇವಲ ಆರಂಭಷ್ಟೇ... ಶೀಘ್ರದಲ್ಲೇ ಚುನಾವಣೆ ಎದುರಾಗಲಿದೆ. ರಾಷ್ಟ್ರ ರಾಜಧಾನಿಯನ್ನು ವಿಷಮುಕ್ತ ಮಾಡಲು ಬಿಜೆಪಿಗೆ ಅವಕಾಶ ಮಾಡಿಕೊಡಬೇಕು. ಸಮಸ್ಯೆ ಎದುರಾದಾಗ ಎಎಪಿ ಎಚ್ಚೆತ್ತುಕೊಳ್ಳುತ್ತದೆ. ಸಮಸ್ಯೆ ಉದ್ಭವಿಸುವ ಮೊದಲು, ಅವರು ಎಚ್ಚೆತ್ತುಕೊಳ್ಳವ ಮುನ್ನವೇ ದೆಹಲಿಯ ಸಮಸ್ಯೆಗಳು ಬಗೆಹರಿಯುತ್ತವೆ'' ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.
#WATCH | Delhi: Toxic foam seen floating on the Yamuna River. Drone visuals from Kalindi Kunj. pic.twitter.com/5VBa2B5l9q
— ANI (@ANI) October 18, 2024
ಸಮಸ್ಯೆಗೆ ಎಎಪಿಯೇ ಕಾರಣ - ಪೂನಾವಾಲಾ: ''ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಮಾತನಾಡಿ, ರಾಜಧಾನಿ ವಿಷಕಾರಿ ಗ್ಯಾಸ್ ಚೇಂಬರ್ ಆಗುತ್ತಿದೆ. ಹೀಗಾಗಲು ಎಎಪಿ ಸರ್ಕಾರವೇ ಕಾರಣ. ಸರ್ಕಾರದ ನಿರ್ಲಕ್ಷ್ಯತನ, ಬೇಜವಾಬ್ದಾರಿತನದಿಂದ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿಯುತ್ತಿದೆ'' ಎಂದು ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಇಂದು ಬೆಳಿಗ್ಗೆ 8 ಗಂಟೆಗೆ 339ಕ್ಕೆ ಇಳಿದಿತ್ತು. ಇದು ಅತ್ಯಂತ ಕಳಪೆ ವಾಯು ಗುಣಮಟ್ಟವಾಗಿದೆ. ದ್ವಾರಕಾ, ಸೆಕ್ಟರ್-8ರಲ್ಲಿ 325, ವಿವೇಕ್ ವಿಹಾರ್ ಪ್ರದೇಶದಲ್ಲಿ 324, ಇಂಡಿಯಾ ಗೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 270 ದಾಖಲಾಗಿತ್ತು.
ಶುಕ್ರವಾರ ನಗರದ ವಾಯು ಗುಣಮಟ್ಟವು ಕಳಪೆ ವಲಯದಲ್ಲಿದೆ. ಭಾಗಶಃ ವಲಯದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಇಂದು ಬೆಳಿಗ್ಗೆ 292ರ ಮೇಲಿತ್ತು. ಹೀಗೆ ಮುಂದುವರಿದರೆ ಉಸಿರಾಟದ ಕಾಯಿಲೆಗೆ ಕಾರಣವಾಗಬಹುದು ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
#WATCH | Delhi: Toxic foam seen floating on the Yamuna River. Visuals from Kalindi Kunj. pic.twitter.com/5KSQRjerSC
— ANI (@ANI) October 18, 2024
ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, 0 ಮತ್ತು 50 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕ (AQI) ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತಿ ಕಳಪೆ’, ಮತ್ತು 401 ಮತ್ತು 500 ‘ತೀವ್ರ’ ಎಂದು ವರ್ಗೀಕರಣ ಮಾಡಲಾಗುತ್ತದೆ. ಕನಿಷ್ಠ ತಾಪಮಾನ 19.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತಲುಪಬಹುದೆಂದು ಅಂದಾಜು ಮಾಡಲಾಗಿದೆ.
ಇದನ್ನೂ ಓದಿ: ಬಿಹಾರದ ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ