ನವದೆಹಲಿ: ಮಹಾರಾಷ್ಟ್ರದ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಕಾಲಾವಕಾಶ ಕೋರಿದ್ದರಿಂದ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಪೂಜಾ ಖೇಡ್ಕರ್ ವಿರುದ್ಧ ಯುಪಿಎಸ್‌ಸಿ ದೆಹಲಿ ಪೊಲೀಸರಿಗೆ ದೂರು ನೀಡಿದೆ. 2023ರ ಬ್ಯಾಚ್ಗೆ ಸೇರಿದ ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ಅವರ ವಿರುದ್ಧ ಅಧಿಕಾರ ದುರುಪಯೋಗ ಮತ್ತು ನಕಲಿ ಪ್ರಮಾಣಪತ್ರಗಳ ಮೂಲಕ ಮೀಸಲಾತಿ ಪಡೆದಿರುವುದು ಸೇರಿದಂತೆ ಅನೇಕ ಆರೋಪಗಳನ್ನು ಮಾಡಲಾಗಿದೆ. ಈ ಸಂಬಂಧ ಪೂಜಾ ಖೇಡ್ಕರ್ ವಿರುದ್ಧದ ಎಲ್ಲಾ ಆರೋಪಗಳ ತನಿಖೆಗಾಗಿ ಕೇಂದ್ರ ಸರ್ಕಾರ ಏಕಸದಸ್ಯ ಸಮಿತಿಯೊಂದನ್ನು ರಚಿಸಿತ್ತು. ಏಕಸದಸ್ಯ ಸಮಿತಿಯು ಜುಲೈ 27ರಂದು ತನ್ನ ತನಿಖಾ ವರದಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಲ್ಲಿಸಿತ್ತು.
ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗುವ ಮೊದಲು ಪೂಜಾ ಖೇಡ್ಕರ್ ಅವರು ಒಬಿಸಿ ವರ್ಗ ಎಂದು ಹೇಳಿಕೊಂಡು ನಕಲಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಂಜಾರಿ ಸಮುದಾಯಕ್ಕೆ ಮಾತ್ರ ಮೀಸಲಿರುವ ಜಾತಿ ಮೀಸಲಾತಿಯ ಲಾಭ ಪಡೆಯಲು ಅಲೆಮಾರಿ ಬುಡಕಟ್ಟು 3 ವರ್ಗದ ಅಡಿಯಲ್ಲಿ ಪೂಜಾ ಖೇಡ್ಕರ್ ಅವರನ್ನು ನೇಮಕ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ. ಇದರ ಜೊತೆಗೆ ಪೂಜಾ ಖೇಡ್ಕರ್ ಅವರು ನಕಲಿ ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ದೂರು ಇದೆ.
ಪೂಜಾ ಖೇಡ್ಕರ್ ಅವರು ಪ್ರೊಬೇಷನರಿ ಸಮಯದಲ್ಲಿ ಕಾನೂನುಬಾಹಿರ ಬೇಡಿಕೆಗಳನ್ನಿಟ್ಟು ವಿವಾದಕ್ಕೆ ಸಿಲುಕಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರು ಖೇಡ್ಕರ್ ವಿರುದ್ಧ ದೂರು ದಾಖಲಿಸಿದ್ದರು. ವಿವಾದದ ನಂತರ, ಮಹಾರಾಷ್ಟ್ರ ಸರ್ಕಾರವು ಪೂಜಾ ಖೇಡ್ಕರ್ ಅವರ ಮೇಲೆ ಕ್ರಮ ಕೈಗೊಂಡಿತ್ತು. ಅವರ ಪ್ರೊಬೇಷನರಿಯನ್ನು ತಡೆಹಿಡಿದಿತ್ತು ಮತ್ತು ಫೀಲ್ಡ್ ಪೋಸ್ಟಿಂಗ್ನಿಂದ ತೆಗೆದುಹಾಕಲು ಆದೇಶಿಸಿತ್ತು. ಜೊತೆಗೆ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (LBSNAA) ಗೆ ವರದಿ ಮಾಡಿತ್ತು.
ಪೂಜಾ ಖೇಡ್ಕರ್ ಅವರ ತಾಯಿ ಮುಲ್ಶಿಯದ ಕೆಲವು ರೈತರ ಜಮೀನನ್ನು ಕಬಳಿಸಲು ಪಿಸ್ತೂಲ್‌ನಿಂದ ಬೆದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಜುಲೈ 18 ರಂದು ಅವರನ್ನು ಬಂಧಿಸಿದ್ದರು.