ಛಿಂದ್ವಾರಾ (ಮಧ್ಯಪ್ರದೇಶ): 5 ವರ್ಷದ ಬಾಲಕಿಯು ತನ್ನ ತಂದೆಯ ಅಂತ್ಯಸಂಸ್ಕಾರವನ್ನು ಕಾಡಿನ ಮಧ್ಯೆ, ಮಳೆಯ ನಡುವೆ ಟರ್ಪಲ್ ಹಿಡಿದು ನೆರವೇರಿಸಿರುವ ಮನಕಲಕುವ ದೃಶ್ಯ ಮಧ್ಯಪ್ರದೇಶದ ಕುಗ್ರಾಮವೊಂದರಲ್ಲಿ ಕಂಡು ಬಂದಿದೆ. ಮಧ್ಯಪ್ರದೇಶದ ಜಮಕುಂಡಾದಲ್ಲಿ ಮಂಗಳವಾರ (ಆ.20) ಘಟನೆ ನಡೆದಿದೆ.
ತಂದೆಯ ಅಂತ್ಯಕ್ರಿಯೆ ನಡೆಸಲು 6 ಅಡಿ 3 ಅಡಿ ಜಾಗ ಕೂಡ ಗ್ರಾಮದಲ್ಲಿ ದೊರಕದೇ ಇದ್ದಾಗ ಕಾಡಿನಲ್ಲಿ ಮಳೆಯ ಮಧ್ಯೆ ತಂದೆಯ ಚಿತೆಗೆ ಪುಟ್ಟ ಬಾಲಕಿ ಕೊಳ್ಳಿ ಇರಿಸಿರುವ ಹೃದಯವಿದ್ರಾವಕ ದೃಶ್ಯ ಎಂಥವರ ಕಣ್ಣಿನಲ್ಲಿ ನೀರು ತರಿಸುವಂತಿದೆ. ಅಂತ್ಯಸಂಸ್ಕಾರದ ವೇಳೆ ಮಳೆಯ ಆರ್ಭಟವೂ ಹೆಚ್ಚಾಗಿತ್ತು. ಇದರಿಂದಾಗಿ ಅಂತ್ಯಸಂಸ್ಕಾರ ಕಷ್ಟವಾಗಿತ್ತು. ಕೊನೆಗೆ ಗ್ರಾಮಸ್ಥರು ಟರ್ಪಲ್ ಹಿಡಿದಾಗ ಬಾಲಕಿ ತನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡಲು ಸಾಧ್ಯವಾಯಿತು.
ಗ್ರಾಮದಲ್ಲಿಲ್ಲ ಸ್ಮಶಾನ: ಮಧ್ಯಪ್ರದೇಶದ ಛಿಂದ್ವಾರದ ಹಳ್ಳಿಯಲ್ಲಿ ಅಧಿಕಾರಿಗಳು ರುದ್ರಭೂಮಿಗಾಗಿ ಈವರೆಗೂ ಜಮೀನು ಕಾಯ್ದಿರಿಸದ ಕಾರಣ ಅಂತ್ಯಕ್ರಿಯೆ ನಡೆಸಲು ಗ್ರಾಮದಲ್ಲಿ ಅವಕಾಶವೇ ಇಲ್ಲ. ಈ ಕಾರಣದಿಂದ ಗ್ರಾಮದ ಅನೇಕರು ಸಾವನ್ನಪ್ಪಿರುವ ತಮ್ಮ ಪ್ರೀತಿ ಪಾತ್ರರ ಚಿತೆಗೆ ಬೆಂಕಿಯೇ ಇಟ್ಟಿಲ್ಲ. ಬದಲಾಗಿ ಶವಗಳನ್ನು ಊರಿಗೆ ತರದೇ ನಗರದಲ್ಲೇ ಅಂತ್ಯಕ್ರಿಯೆ ಮುಗಿಸಿ ಬಂದಿದ್ದಾರೆ.
ಸ್ಥಳಾವಕಾಶದ ಕೊರತೆಯಿಂದ ಅರಣ್ಯದಲ್ಲಿ ಗ್ರಾಮದ ಮುಖ್ಯಸ್ಥರ ಮಾರ್ಗದರ್ಶನದಂತೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಗ್ರಾಮ ಪಂಚಾಯಿತಿ ಜಮಕುಂಡಾದಲ್ಲಿ ಭದ್ರಿ ಮತ್ತು ಜಮಕುಂದ ಎಂಬ ಎರಡು ಗ್ರಾಮಗಳಿವೆ ಎಂದು ಗ್ರಾಮದ ಮುಖ್ಯಸ್ಥ ಸರಳ ಪ್ರಕಾಶ್ ಕುಮ್ರೆ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಭದ್ರಿಯಲ್ಲಿ ಸ್ಮಶಾನವಿದ್ದರೂ ಜಮಕುಂದ ಗ್ರಾಮದಲ್ಲಿ ಮೋಕ್ಷಧಾಮ ನಿರ್ಮಿಸಲು ಕಂದಾಯ ಸರ್ಕಾರಿ ಜಾಗವಿಲ್ಲ. ಗ್ರಾಮದಲ್ಲಿ ಅರಣ್ಯ ಇಲಾಖೆಯ ಜಾಗವಿದ್ದು, ಸದ್ಯ ಅಲ್ಲೇ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದರೆ ಅರಣ್ಯ ಪ್ರದೇಶವಾಗಿರುವ ಕಾರಣ ಅಲ್ಲಿ ಮೋಕ್ಷಧಾಮ ನಿರ್ಮಿಸಲು ಅನುಮತಿಯಿಲ್ಲ ಎಂದು ಗ್ರಾಮದ ಮುಖ್ಯಸ್ಥ ತಿಳಿಸಿದ್ದಾರೆ.