ಜೈಪುರ: ರಾಜಸ್ಥಾನದ ಏಳು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬುಧವಾರ ತಡರಾತ್ರಿ ಎಐಸಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹಾಲಿ ಸಂಸದ ಬ್ರಿಜೇಂದ್ರ ಓಲಾ ಪುತ್ರ ಅಮಿತ್ ಓಲಾ ಅವರು ಜುಂಜುನು ಮತ್ತು ಆರ್ಯನ್ ಖಾನ್ ಅವರಿಗೆ ಟಿಕೆಟ್ ನೀಡಿದೆ.
ರಾಮಗಢ ಕ್ಷೇತ್ರದ ಅಭ್ಯರ್ಥಿ ಜುಬೇರ್ ಖಾನ್ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಅವರ ಮಗನಿಗೆ ಟಿಕೆಟ್ ನೀಡಲಾಗಿದೆ. ದೌಸಾದಿಂದ ದೀನದಯಾಳ್ ಬೈರ್ವಾ ಪಕ್ಷವನ್ನು ಪ್ರತಿನಿಧಿಸಿದರೆ, ಕಸ್ತೂರ್ ಚಂದ್ ಮೀನಾ, ರತನ್ ಚೌಧರಿ, ಮಹೇಶ್ ರೋಟ್ ಮತ್ತು ರೇಷ್ಮಾ ಮೀನಾ ಕ್ರಮವಾಗಿ ದಿಯೋಲಿ - ಉನಿಯಾರಾ, ಖಿನ್ವಸರ್, ಚೋರಾಸಿ ಮತ್ತು ಸಾಲುಂಬರ್‌ಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಏಕಾಂಗಿ ಸ್ಪರ್ಧೆ: ಉತ್ತರ ಪ್ರದೇಶ, ಕೇರಳದಲ್ಲಿ ಮೈತ್ರಿ ಪಕ್ಷಗಳೊಂದಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಇಲ್ಲಿ ಯಾವುದೇ ಪ್ರಾದೇಶಿಕ ಪಕ್ಷಗಳೊಂದಿಗೆ ಉಪ ಚುನಾವಣೆ ಮೈತ್ರಿ ಮಾಡಿಕೊಂಡಿಲ್ಲ. ಇನ್ನು ಏಳರಲ್ಲಿ 4 ಸ್ಥಾನಗಳು ಈ ಹಿಂದೆ ಕಾಂಗ್ರೆಸ್ ವಶದಲ್ಲಿದ್ದರೆ, ಒಂದು ಕ್ಷೇತ್ರ ಭಾರತ್ ಆದಿವಾಸಿ ಪಕ್ಷ (ಬಿಎಪಿ) ಮತ್ತೊಂದು ಬಿಜೆಪಿ ವಶದಲ್ಲಿದೆ.
ಇನ್ನು ಬಿಜೆಪಿ ಕೂಡ ಚರೋಸಿ ಹೊರತು ಪಡಿಸಿ ಇನ್ನುಳಿದ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ನವೆಂಬರ್ 13ರಂದು ರಾಜಸ್ಥಾನದಲ್ಲಿ ನಡೆಯುತ್ತಿರುವ ಉಪಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕಡೇ ದಿನವಾಗಿದೆ. ಈ ಚುನಾವಣೆ ಫಲಿತಾಂಶ ನವೆಂಬರ್ 23ರಂದು ಹೊರ ಬೀಳಲಿದೆ
ನಿಧನದಿಂದ ತೆರವಾದ ಕ್ಷೇತ್ರಗಳು: ರಾಮಗಢದಲ್ಲಿ ಕಾಂಗ್ರೆಸ್‌ನ ಜುಬೇರ್ ಖಾನ್ ಮತ್ತು ಸಾಲುಂಬಾರ್‌ನಲ್ಲಿ ಬಿಜೆಪಿಯ ಅಮೃತಲಾಲ್ ಮೀನಾ ನಿಧನದಿಂದ ಈ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಇನ್ನು ಉಳಿದ ಐದು ಕ್ಷೇತ್ರದಲ್ಲಿ ಶಾಸಕರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ಈ ಕ್ಷೇತ್ರದಲ್ಲಿ ಸ್ಥಾನ ತೆರವಾಗಿದ್ದು, ಚುನಾವಣೆ ಅನಿವಾರ್ಯವಾಗಿದೆ.
ಸೈಕಲ್ ಚಿಹ್ನೆಯಡಿ ಇಂಡಿಯಾ ಒಕ್ಕೂಟ ಸ್ಪರ್ಧೆ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಾಂಪ್ರದಾಯಿಕ ಸೀಟು ಹಂಚಿಕೆ ಬದಲಾಗಿ ಗೆಲುವು ಪ್ರಮುಖವಾಗಿದೆ. ಈ ಹಿನ್ನೆಲೆ ಉಪ ಚುನಾವಣೆಗೆ ಇಂಡಿಯಾ ಬ್ಲಾಕ್ ಅಭ್ಯರ್ಥಿಗಳು ಸೈಕಲ್ ಚಿಹ್ನೆಯಡಿ ಸ್ಪರ್ಧೆ ಮಾಡಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ದೊಡ್ಡ ಜಯಕ್ಕಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಒಗ್ಗಟ್ಟಾಗಿದ್ದು, ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇಂಡಿಯಾ ಬ್ಲಾಕ್ ಹೊಸ ಗೆಲುವಿನ ಅಧ್ಯಾಯ ಬರೆಯಲಿದೆ. ಒಟ್ಟಾಗಿ ನಡೆಸುವ ಈ ಪ್ರಯತ್ನ ಮತ್ತು ಬೆಂಬಲದಿಂದ 9 ಕ್ಷೇತ್ರದಲ್ಲೂ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ 9 ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಮಹಾ ವಿಕಾಸ್ ಅಘಾಡಿ ಮಧ್ಯೆ 85-85-85 ಸೂತ್ರದ ಸೀಟು ಹಂಚಿಕೆ