ಅನಂತಪುರ (ಆಂಧ್ರಪ್ರದೇಶ): ಕರ್ನಾಟಕ, ತೆಲಂಗಾಣದಲ್ಲಿ 'ಗ್ಯಾರಂಟಿ'ಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಈಗ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯಲ್ಲೂ ಇದೇ ತಂತ್ರವನ್ನು ಅನುಸರಿಸಲು ಮುಂದಾಗಿದೆ. ಬಡ ಕುಟುಂಬದ ಮಹಿಳೆಗೆ ಮಾಸಿಕವಾಗಿ 5 ಸಾವಿರ ರೂಪಾಯಿ ನೀಡುವುದಾಗಿ ಮೊದಲ ಭರವಸೆ ನೀಡಿದೆ.
ಇಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮುಂಬರುವ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ತಿಂಗಳು ಕುಟುಂಬದ ಮಹಿಳೆಗೆ 5 ಸಾವಿರ ರೂಪಾಯಿ ನೀಡಲಾಗುವುದು. ಇದು ಮೋದಿ ಗ್ಯಾರಂಟಿಯಂತಲ್ಲ, ಕಾಂಗ್ರೆಸ್ ನೀಡುತ್ತಿರುವ ಪಕ್ಕಾ ಭರವಸೆ ಎಂದು ಹೇಳಿದರು.
'ಇಂದಿರಮ್ಮ ಸಾರ್ವತ್ರಿಕ ಮೂಲ ಆದಾಯ' ಯೋಜನೆಯಡಿ ಹಣವನ್ನು ನೇರವಾಗಿ ಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ರಾಯಲಸೀಮಾ, ಉತ್ತರ ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ವಿಶೇಷ ಅನುದಾನದ ಪ್ಯಾಕೇಜ್ ಘೋಷಿಸಲಾಗುವುದು. ದುಗರಾಜಪಟ್ಟಣಂ ಬಂದರು ಮತ್ತು ಕಡಪದಲ್ಲಿ ಉಕ್ಕು ಕಾರ್ಖಾನೆಯನ್ನು ನಿರ್ಮಿಸುವುದಾಗಿಯೂ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.
ಪ್ರಧಾನಿ ಮೋದಿ ವಿರುದ್ಧ ಕಿಡಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಖರ್ಗೆ ಅವರು, 2 ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮೆ, ರೈತರ ಆದಾಯ ದ್ವಿಗುಣಗೊಳಿಸುವ ಮತ್ತು ಇತರ ಭರವಸೆಗಳನ್ನು ನೀಡಿದ ಪ್ರಧಾನಿ ಮೋದಿ ಅವರು ಯಾವುದನ್ನೂ ಈಡೇರಿಸಿಲ್ಲ. ಆದರೆ, ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು.
ರಾಹುಲ್, ಕಾಂಗ್ರೆಸ್ ವಿರುದ್ಧ ತೆಗಳುತ್ತಲೇ ಇರುತ್ತಾರೆ. ಮೋದಿಗೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಕಂಡರೆ ಭಯ. ಹೀಗಾಗಿ ವಾಗ್ದಾಳಿ ಮಾಡುತ್ತಲೇ ಇರುತ್ತಾರೆ. ಬಿಜೆಪಿ ಸರ್ಕಾರ ತೆಗೆದುಕೊಳ್ಳುತ್ತಿರುವ ಯೋಜನೆಗಳ ಲಾಭ ಎಲ್ಲವೂ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ಯೋಜನೆಗಳು ಎಂದು ಖರ್ಗೆ ಹೇಳಿದರು.
ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ವರಿಷ್ಠರು ಆಂಧ್ರಪ್ರದೇಶವನ್ನು ಪ್ರಧಾನಿ ಮೋದಿಗೆ ಗಿರವಿ ಇಟ್ಟಿದ್ದಾರೆ. ಏಕೆಂದರೆ ಅವರು ಪ್ರಧಾನಿ ಮೋದಿಯವರಿಗೆ ಭಯಪಡುತ್ತಾರೆ. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಿಗೆ ಯಾರ ಭಯವೂ ಇಲ್ಲ ಎಂದು ಅವರು ಗುಡುಗಿದರು.
ಬಳಿಕ ಮಾತನಾಡಿ ಶರ್ಮಿಳಾ ಅವರು, ಪ್ರಧಾನಿಗೆ ಪಕ್ಷದ ನಾಯಕರು ಹೆದರುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿ ಅಧಿಕಾರದ ಗದ್ದುಗೆ ಹಿಡಿಯಲಿದೆ. ಯಾರೂ ನಮ್ಮನ್ನು ಕಡಿಮೆ ಅಂದಾಜು ಮಾಡಬಾರದು ಎಂದು ಹೇಳಿದರು.
ಮೋದಿ ಗ್ಯಾರಂಟಿಯಂತಲ್ಲ: ಕಾಂಗ್ರೆಸ್ ಗ್ಯಾರಂಟಿಗಳು ಮೋದಿ ಕಿ ಗ್ಯಾರಂಟಿಯಂತಲ್ಲ. ಪಕ್ಷ ಏನೇ ಭರವಸೆ ನೀಡಿದರೂ ಅದನ್ನು ಜನರಿಗೆ ತಲುಪಿಸುತ್ತದೆ. ಮಹಿಳೆಯರಿಗೆ 5 ಸಾವಿರ ರೂಪಾಯಿ ನೀಡಲಾಗುವುದು ಎಂದು ಕಾರ್ಯಕ್ರಮದ ನಂತರ ಮಲ್ಲಿಕಾರ್ಜುನ್ ಖರ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಬಸ್ಗಳ ಸ್ಥಿತಿ ಅದೋಗತಿ; ಸಿಎಂ ಭದ್ರತೆಗಾಗಿ ಬುಲೆಟ್ ಪ್ರೂಫ್ ಬಸ್ ಖರೀದಿ!