ಮುಂಬೈ: ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಬಾಂದ್ರಾದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಲ್ವಾನ್ನಲ್ಲಿ 8 ತಿಂಗಳ ಹಿಂದೆ ಅನಾವರಣಗೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ನಿರ್ಮಾಣದಲ್ಲಿ ಭಾರೀ ಮೊತ್ತದ ಭ್ರಷ್ಟಚಾರ ನಡೆಸಲಾಗಿದೆ ಎಂದು ಮಹಾವಿಕಾಸ ಅಘಾಡಿಯ ನಾಯಕರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ವಧವನ್ ಬಂದರು ಯೋಜನೆ ಭೂಮಿ ಪೂಜೆಗೆ ಪಾಲ್ಘಾರ್ಗೆ ಬರುತ್ತಿರುವ ಪ್ರಧಾನಿ ಮೋದಿ, ಪ್ರತಿಮೆ ಕುಸಿದಿರುವ ಬಗ್ಗೆ ಮಹಾರಾಷ್ಟ್ರ ಜನರ ಕ್ಷಮೆಯಾಚಿಸಬೇಕು. ಕಾರಣ ಆ ಪ್ರತಿಮೆ ಅನಾವರಣ ಮಾಡಿದವರು ಅವರಾಗಿದ್ದಾರೆ ಎಂದು ಮಹಾವಿಕಾಸ ಆಘಾಡಿ ನಾಯಕರು ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ಮಹಾ ವಿಕಾಸ ಅಡಿ ಬಾಂದ್ರಾದಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗಿತ್ತು.
ಈ ಸಂಬಂಧ ಪೋಸ್ಟ್ ಮಾಡಿದ್ದ ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ವರ್ಷಾ ಗಾಯಕ್ವಾಡ್, ಇಂದು ಬಾಂದ್ರಾದಲ್ಲಿ ಮೋದಿ ವಿರುದ್ಧ ಮಹಾ ವಿಕಾಸ ಅಘಾಡಿ ಪ್ರತಿಭಟನೆ ನಡೆಸಲಿದೆ. ಪ್ರತಿಮೆ ಕುಸಿತದ ಸಂಬಂಧ ಪ್ರಧಾನಿಗಳು ಮಹಾರಾಷ್ಟ್ರದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ, ಇಂದು ಬೆಳಗ್ಗೆ 7ಕ್ಕೆ ನನ್ನ ಮನೆಗೆ ಆಗಮಿಸಿದ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಗೆ ಮುಂದಾಗಿದ್ದ ವರ್ಷಾ ಗಾಯಕ್ವಾಡ್ ಅವರಿಗೆ ಬಾಂದ್ರಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ನಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ಅಥವಾ ಮೆರವಣಿಗೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ತೀರ್ಮಾನ ನಡೆಸಿದೆ. ಮುಂಬೈನ ಅಜಾದ್ ಮೈದಾನ್ನಲ್ಲಿ ಮಾತ್ರವೇ ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಲು ಅವಕಾಶವಿದೆ ಎಂಬ ಅಂಶ ಉಲ್ಲೇಖಿಸಲಾಗಿದೆ. ಈ ಕಾರಣದಿಂದ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಉಲ್ಲೇಖದೊಂದಿಗೆ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: ಪರಿಸರವಾದಿಗಳ ವಿರೋಧದ ನಡುವೆ ಇಂದು ವಧವನ್ ಬಂದರು ಯೋಜನೆಗೆ ಪ್ರಧಾನಿ ಭೂಮಿ ಪೂಜೆ