ಪಾಟ್ನಾ(ಬಿಹಾರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪಾಟ್ನಾ ಸಾಹಿಬ್‌ನ ಕಾಂಗ್ರೆಸ್ ಅಭ್ಯರ್ಥಿ ಅನ್ಶುಲ್ ಅವಿಜಿತ್ ಪರ ಭರ್ಜರಿ ಮತಯಾಚನೆ ನಡೆಸಿದರು. ಖುಸ್ರುಪುರದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಅವರ ಸಂದರ್ಶನವನ್ನು ನೀವು ನೋಡಿದ್ದೀರಿ, ಅದರಲ್ಲಿ ನಾಲ್ಕು ಜನರು ಅವರನ್ನು ಸಂದರ್ಶಿಸಿದ್ದಾರೆ. ಪ್ರಶ್ನೆ ಪತ್ರಿಕೆ ಮೊದಲೇ ಸೋರಿಕೆಯಾದಂತೆ ಕಂಡುಬರುತ್ತದೆ. ಯಾವ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮೊದಲೇ ಪ್ರಧಾನ ಮಂತ್ರಿಗೆ ತಿಳಿಸಲಾಗಿದೆ. ದೇವರು ನನ್ನನ್ನು ಕಳುಹಿಸಿದ್ದಾನೆ. ದೇವರ ಆದೇಶದಂತೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಸಂದರ್ಶನದಲ್ಲಿ ಹೇಳುತ್ತಾರೆ. ಮೋದಿ ಜೀ ಅವರು ಸುದೀರ್ಘ ಭಾಷಣ ಮಾಡುವುದನ್ನು ನಿಲ್ಲಿಸಬೇಕು, ಅವರು ದೇಶವನ್ನು ವಿಭಜಿಸಲು ಪ್ರಯತ್ನಿಸಬಾರದು ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಅವರು ಬಿಹಾರದ ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ ಎಂಬುದನ್ನು ಬಿಹಾರದ ಜನತೆಗೆ ತಿಳಿಸಬೇಕು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ನೀವು ಒಂದೇ ಒಂದು ಉದ್ಯೋಗವನ್ನೂ ನೀಡಿಲ್ಲ. ಈ ಹಿಂದೆ ಅನೇಕ ಉದ್ಯೋಗಾವಕಾಶಗಳು ಇದ್ದವು ಆದರೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಉದ್ಯೋಗಾವಶ ಇಲ್ಲದಂತಾಯಿತು. ಸೇನೆಯಲ್ಲಿ ಉದ್ಯೋಗ ಪಡೆಯಲು ಇದ್ದ ಮಾರ್ಗಗಳು ಮುಚ್ಚಿಹೋಗಿವೆ ಎಂದು ಕಿಡಿಕಾರಿದರು.
ಈ ಬಾರಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಂತರ ಮಾಡುವ ಮೊದಲ ಕೆಲಸವೆಂದರೆ ಅಗ್ನಿವೀರ್ ಯೋಜನೆಯನ್ನು ಹರಿದು ಕಸದ ಬುಟ್ಟಿಗೆ ಎಸೆಯುವುದು. ಅಗ್ನಿವೀರ್ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿಗೆ ಎರಡು ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ನಮ್ಮ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬರಲಿದ್ದು, ಹಿಂದೆ ಸೇನೆಗೆ ನಡೆಯುತ್ತಿದ್ದ ನೇಮಕಾತಿ ರೀತಿಯಲ್ಲಿಯೇ ನೇಮಕಾತಿ ನಡೆಸಿ ಕಾಯಂ ಉದ್ಯೋಗ ಮತ್ತು ಶಾಶ್ವತ ಪಿಂಚಣಿ ಯೋಜನೆ ಆರಂಭಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
2024ರ ಲೋಕಸಭಾ ಚುನಾವಣೆ ಸಂವಿಧಾನವನ್ನು ಉಳಿಸುವ ಚುನಾವಣೆ. ಈ ಜನರು(ಬಿಜೆಪಿಗರು) ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನೆಹರೂ ಅವರು ಒಟ್ಟಾಗಿ ರಚಿಸಿದ ಸಂವಿಧಾನವನ್ನು ಬದಲಾಯಿಸಲು ಬಯಸುತ್ತಾರೆ. ಆದರೆ ನಾವು ಇರುವವರೆಗೂ ಸಂವಿಧಾನ ಅದನ್ನು ಬದಲಾಯಿಸಲು ಬಿಡುವುದಿಲ್ಲ. ಸಂವಿಧಾನ ರಚನೆಯಾಗುವುದಕ್ಕೂ ಮೊದಲು ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರಿಗೆ ಯಾವುದೇ ಹಕ್ಕುಗಳು ಇರಲಿಲ್ಲ. ಈಗ ಸಂವಿಧಾನದಿಂದಾಗಿ ಜನರಿಗೆ ಹಕ್ಕುಗಳು ಸಿಕ್ಕಿವೆ ಎಂದು ರಾಹುಲ್ ಹೇಳಿದರು.
ಈ ವೇಳೆ ರಾಷ್ಟ್ರೀಯ ಜನತಾ ದಳದ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ವಿಕಾಸಶೀಲ್ ಇನ್ಸಾನ್ ಪಕ್ಷದ ಅಧ್ಯಕ್ಷ ಮುಕೇಶ್ ಸಾಹ್ನಿ ಮತ್ತು ಶಾಸಕ ನಾಯಕ ದೀಪಂಕರ್ ಭಟ್ಟಾಚಾರ್ಯ ಉಪಸ್ಥಿತರಿದ್ದರು.
ಇದನ್ನೂ ಓದಿ: ವಿರೋಧ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲು, ಮುಸ್ಲಿಮರಿಗೆ ಮೀಸಲಾತಿ: ಮೋದಿ - PM Narendra Modi