ಮಲಪ್ಪುರಂ (ಕೇರಳ): ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಭಾರಿ ಅಂತರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಕೇರಳ ಜಿಲ್ಲೆಯಲ್ಲಿ ಬುಧವಾರ ರೋಡ್ ಶೋ ನಡೆಸಿದರು.
ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಹುಲ್ ಗಾಂಧಿ ಕೇರಳ ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ವಯನಾಡು ಲೋಕಸಭಾ ಕ್ಷೇತ್ರದ ಭಾಗವಾಗಿರುವ ಎಡವನ್ನಾದಲ್ಲಿ ರೋಡ್ ಶೋ ನಡೆಸಿದರು. ಶೋ ನಡೆದ ಮಾರ್ಗದುದ್ದಕ್ಕೂ ಸಾವಿರಾರು ಯುಡಿಎಫ್ ಕಾರ್ಯಕರ್ತರು ಮತ್ತು ಬೆಂಬಲಿಗರು ಜಮಾಯಿಸಿದ್ದರು. ಇದಕ್ಕೂ ಮುನ್ನ ಅವರಿಗೆ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ರಾಯ್ ಬರೇಲಿ ಮತ್ತು ವಯನಾಡಿನಲ್ಲೂ ರಾಹುಲ್ಗೆ ಭಾರಿ ಗೆಲುವು: ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಕೇರಳದ ವಯನಾಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರಿ ಅಂತರದಿಂದ ಗೆಲವು ಪತಾಕೆ ಹಾರಿಸಿದ್ದರು. ರಾಯ್‌ಬರೇಲಿಯಲ್ಲಿ ಸುಮಾರು 390030 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಮಣಿಸಿದ್ದರು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಹುಲ್ ಗಾಂಧಿ 6,87,649 ಮತಗಳನ್ನು ಗಳಿಸಿದ್ದರು. ಪ್ರತಿಸ್ಪರ್ಧಿ ದಿನೇಶ್ ಪ್ರತಾಪ್ ಸಿಂಗ್ 2,96,703 ಮತಗಳನ್ನು ಪಡೆದುಕೊಂಡಿದ್ದರು.
ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಎಂನ ಆ್ಯನಿ ರಾಜಾ ಅವರನ್ನು 3,64,422 ಮತಗಳ ಅಂತರದಿಂದ ಸೋಲಿಸಿದ್ದರು. ಇಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರು, 1,41,045 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಉತ್ತರಪ್ರದೇಶದ ರಾಯಬರೇಲಿ ಮತ್ತು ಅಮೇಥಿಯಲ್ಲಿ ನಿನ್ನೆ ಭರ್ಜರಿ ಶೋಗಳನ್ನು ಮಾಡುವ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದರು. ಉತ್ತರಪ್ರದೇಶದ ಕಾರ್ಯಕ್ರಮದ ಬಳಿಕ ಕೇರಳದ ವಯನಾಡಿಗೆ ಆಗಮಿಸಿ, ತಮಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ಹೇಳಿದ್ದಾರೆ ರಾಹುಲ್ ಗಾಂಧಿ.
ಅಮೇಥಿ, ರಾಯಬರೇಲಿಯಲ್ಲಿ ನಡೆದ ಸಮಾರಂಭಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ ಎಂದು ಟೀಕಿಸಿದ್ದರು. ಇದೇ ವೇಳೆ ವಾರಾಣಸಿಯಲ್ಲಿ ಪ್ರಿಯಾಂಕಾ ಗಾಂಧಿ ಅಖಾಡಕ್ಕೆ ಇಳಿದಿದ್ದರೆ ಪ್ರಧಾನಿ ಮೂರು ಲಕ್ಷ ಮತಗಳಿಂದ ಸೋಲುತ್ತಿದ್ದರು ಎಂದು ಅಭಿಪ್ರಾಯ ಪಟ್ಟಿದ್ದರು.