ನವದೆಹಲಿ: ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷ ಮೂವರು ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಹಾಲಿ ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ಮತ್ತು ಡಾ.ಸೈಯದ್ ನಾಸೀರ್ ಹುಸೇನ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಮೂರನೇ ಅಭ್ಯರ್ಥಿಯಾಗಿ ಅಜಯ್ ಮಾಕೇನ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಇದೇ ವೇಳೆ, ತೆಲಂಗಾಣದಿಂದ ರೇಣುಕಾ ಚೌಧರಿ, ಅನಿಲ್ ಕುಮಾರ್ ಯಾದವ್ ಹಾಗೂ ಮಧ್ಯಪ್ರದೇಶದಿಂದ ಅಶೋಕ್ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇಂದು ಬೆಳಗ್ಗೆ ಹಿರಿಯ ನಾಯಕಿ ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜಸಭೆ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೇ, ಬಿಹಾರದಿಂದ ಡಾ.ಅಖಿಲೇಶ್ ಪ್ರಸಾದ್ ಸಿಂಗ್, ಹಿಮಾಚಲ ಪ್ರದೇಶದಿಂದ ಅಭಿಷೇಕ್ ಮನು ಸಿಂಘ್ವಿ, ಮಹಾರಾಷ್ಟ್ರದಿಂದ ಚಂದ್ರಶೇಖರ್ ಹಂಡೋರ್ ಅವರಿಗೆ ಟಿಕೆಟ್ ನೀಡಲಾಗಿದೆ.
ನಾಳೆ ಮೂವರಿಂದ ನಾಮಪತ್ರ ಸಲ್ಲಿಕೆ: ಕರ್ನಾಟಕದಿಂದ ರಾಜ್ಯಸಭೆಗೆ ನಾಲ್ವರನ್ನು ಆಯ್ಕೆ ಮಾಡಬಹುದಾಗಿದೆ. ಈ ಪೈಕಿ ಸಂಖ್ಯಾಬಲದ ಅನುಸಾರ ಕಾಂಗ್ರೆಸ್ನಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬರನ್ನು ನೇರವಾಗಿ ನಾಮನಿರ್ದೇಶನ ಮಾಡಬಹುದು. ಈ ಬಾರಿ ಹಾಲಿ ರಾಜ್ಯಸಭಾ ಸದಸ್ಯರಾದ ದಲಿತ ಸಮುದಾಯದ ಎಲ್.ಹನುಮಂತಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದೆ. ಇವರ ಬದಲಿಗೆ ದೆಹಲಿಯ ಹಿರಿಯ ಮುಖಂಡ ಅಜಯ್ ಮಾಕೇನ್ ಅವರಿಗೆ ಟಿಕೆಟ್ ನೀಡಲಾಗಿದೆ. ನಾಳೆ ಚಂದ್ರಶೇಖರ್, ನಾಸೀರ್, ಮಾಕೇನ್ ಸೇರಿ ಮೂವರು ತಮ್ಮ ನಾಮಪತ್ರ ಸಲ್ಲಿಸುವರು.
ಹಾಲಿ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಉತ್ತಮ ಕಾರ್ಯ ಮಾಡಿದ್ದರು. ಮಂಡ್ಯ, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಚುನಾವಣಾ ಸಂಯೋಜಕರನ್ನಾಗಿ ನೇಮಿಸಿ ಜವಾಬ್ದಾರಿ ನೀಡಲಾಗಿತ್ತು. ಮೂರೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಟಿಕೆಟ್ ಕೊಡಲಾಗಿದೆ.
ಮತ್ತೊಬ್ಬ ಹಾಲಿ ಸದಸ್ಯರಾದ ಸೈಯದ್ ನಾಸೀರ್ ಹುಸೇನ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರು. ಇದರಿಂದಾಗಿ ಅವರಿಗೆ ಮತ್ತೊಮ್ಮೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಿದೆ. ಮತ್ತೊಂದೆಡೆ, ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾರಾಯಣಸಾ ಭಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ.
ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರುವರಿ 27ರಂದು ಚುನಾವಣೆ ನಡೆಯಲಿದೆ. ನಾಲ್ಕು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಇದನ್ನೂ ಓದಿ: ಮಾಜಿ ಪಿಎಂ ಮನಮೋಹನ್ ಸಿಂಗ್ ಬದಲಿಗೆ ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ನಾಮಪತ್ರ