ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ತನ್ನನ್ನು ಬಂಧಿಸುವ ಯತ್ನ, ಸರ್ಕಾರವನ್ನು ಬೀಳಿಸಲು ಬಿಜೆಪಿ ಸಂಚು ಯತ್ನದ ಆರೋಪದ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿಲುವಳಿಯನ್ನು ಶುಕ್ರವಾರ ಮಂಡಿಸಿದರು. ಇಂದು (ಶನಿವಾರ) ಅದರ ಮೇಲೆ ಚರ್ಚೆ ನಡೆಯಲಿದೆ.
ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣದ ವೇಳೆ ಅಡ್ಡಿ ಉಂಟು ಮಾಡಿದ ಆರೋಪದ ಮೇಲೆ 8 ಬಿಜೆಪಿ ಶಾಸಕರ ಪೈಕಿ 7 ಮಂದಿಯನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಇದರಿಂದ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕರು ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಅವರ ಸಮ್ಮುಖದಲ್ಲಿ ಶನಿವಾರ ವಿಧಾನಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚೆಗೆ ತರಲಿದ್ದಾರೆ.
70 ಸದಸ್ಯ ಬಲದ ವಿಧಾನಸಭೆಯಲ್ಲಿ ಸಿಎಂ ಕೇಜ್ರಿವಾಲ್ ಸರ್ಕಾರ ವಿಶ್ವಾಸ ಮತ ಯಾಚಿಸುತ್ತಿರುವುದು ಇದು ಎರಡನೇ ಬಾರಿ. ಪ್ರಸ್ತುತ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 8 ಶಾಸಕರನ್ನು ಹೊಂದಿದೆ. ಹೀಗಾಗಿ ನಿಲುವಳಿ ಸಲೀಸಾಗಿ ಪಾಸ್ ಆಗಲಿದೆ. ಇದರಿಂದ ತಮ್ಮ ಸರ್ಕಾರ ಸುಭದ್ರವಾಗಿದೆ. ಶಾಸಕರ ಖರೀದಿ ಸಾಧ್ಯವಿಲ್ಲ ಎಂಬುದನ್ನು ಕೇಜ್ರಿವಾಲ್ ಸಾಬೀತು ಮಾಡಲಿದ್ದಾರೆ. ಇದರ ಜೊತೆಗೆ ಆಪ್ ಶಾಸಕರ ನಿಷ್ಠೆಯೂ ಇಲ್ಲಿ ಬಯಲಾಗಲಿದೆ. ಬಿಜೆಪಿಯ ವಿರುದ್ಧ ಹರಿಹಾಯಲು ಸದನದಲ್ಲಿ ಅವಕಾಶ ಕೂಡ ಸಿಗಲಿದೆ.
ಬಿಜೆಪಿ ವಿರುದ್ಧ ಸಿಎಂ ಕೇಜ್ರಿ 'ಖರೀದಿ' ಆರೋಪ: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿಲುವಳಿ ಮಂಡಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಪ್ನ ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂಪಾಯಿ ಆಫರ್ ಮಾಡಿದೆ. ಈ ಬಗ್ಗೆ ನಮ್ಮ ಪಕ್ಷದ ಇಬ್ಬರು ಶಾಸಕರು ನನ್ನ ಬಳಿ ದೂರಿದ್ದಾರೆ. ನನ್ನನ್ನು ಬಂಧಿಸಿ, ಸರ್ಕಾರ ಬೀಳಿಸುವುದೇ ಜೆಪಿಯ ದುರುದ್ದೇಶವಾಗಿದೆ ಎಂದು ಆರೋಪಿಸಿದರು.
ಆಪ್ನ 21 ಶಾಸಕರೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಆದರೆ, ಅವರೆಲ್ಲರೂ 'ಆಪರೇಷನ್ ಕಮಲ'ಕ್ಕೆ ಬಲಿಯಾಗಲು ಸಿದ್ಧರಿಲ್ಲ. ಬಿಜೆಪಿ ಸಂಪರ್ಕಿಸಿದ ಯಾವೊಬ್ಬ ಶಾಸಕರೂ ಆಫರ್ ಸ್ವೀಕರಿಸಿಲ್ಲ. ನಮ್ಮ ಸರ್ಕಾರಕ್ಕೆ ಬಹುಮತ ಇದೆಯೇ ಇಲ್ಲವೇ ಎಂಬುದು ನಿಲುವಳಿ ಮೂಲಕ ಬಹಿರಂಗವಾಗಲಿದೆ ಎಂದು ಹೇಳಿದರು.
ಬಂಧಿಸುವ ಯತ್ನ: ದೆಹಲಿ ಅಬಕಾರಿ ನೀತಿ ಹಗರಣ ಸುಳ್ಳೆಂದು ಸಮರ್ಥಿಸಿಕೊಂಡ ಕೇಜ್ರಿವಾಲ್, ಪ್ರಕರಣದಲ್ಲಿ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ತಥಾಕಥಿತ ಮದ್ಯದ ಪ್ರಕರಣದಲ್ಲಿ ನನ್ನನ್ನೂ ಬಂಧಿಸಿ, ಸರ್ಕಾರವನ್ನು ಬೀಳಿಸುವುದೇ ಉದ್ದೇಶವಾಗಿದೆ. ಆದರೆ, ಇದ್ಯಾವುದೂ ನಡೆಯಲು ನಮ್ಮ ಶಾಸಕರು ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಚುನಾವಣೆಯಿಂದ ಆಪ್ ವಿರುದ್ಧ ಗೆಲ್ಲಲು ಸಾಧ್ಯವೇ ಇಲ್ಲ ಎಂಬುದು ಬಿಜೆಪಿಗೆ ಗೊತ್ತಿದೆ. ಅದಕ್ಕಾಗಿಯೇ ಅವರು ಆಪ್ ಸರ್ಕಾರವನ್ನು ಬೀಳಿಸಲು ಅನ್ಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ನಮ್ಮ ಯಾವ ಶಾಸಕರೂ ಪಕ್ಷಾಂತರ ಮಾಡಲ್ಲ ಎಂದು ತೋರಿಸಲು, ನಾನು ಈ ನಿರ್ಣಯವನ್ನು ಮಂಡಿಸಿದ್ದೇನೆ. ಸದನವು ಸರ್ಕಾರ ಮೇಲೆ ನಂಬಿಕೆಯನ್ನು ಸಾಬೀತು ಮಾಡುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮದ್ಯ ನೀತಿ ಹಗರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ 6ನೇ ಸಮನ್ಸ್ ಕಳುಹಿಸಿದ ಇಡಿ