ನವದೆಹಲಿ: ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ತಮ್ಮ ವಿರುದ್ಧ 'ಫತ್ವಾ' ಹೊರಡಿಸಲಾಗಿದೆ ಎಂದು ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ, ಕಾರ್ಯಕ್ರಮ ನಡೆದ ದಿನದಿಂದ ಒಂದು ವರ್ಗದ ಜನರಿಂದ ನನಗೆ ನಿಂದನೆ ಮತ್ತು ಫೋನ್ ಕರೆಗಳ ಮೂಲಕ ಬೆದರಿಕೆ ಬರುತ್ತಿದೆ ಎಂದು ಹೇಳಿದರು.
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22ರಂದು ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳು ಮತ್ತು ಸಾಧು ಸಂತರು, ಗಣ್ಯಾತಿಗಣ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು.
''ಸಾಮಾಜಿಕ ಜಾಲತಾಣದ ಮೂಲಕ ನನಗೆ ಫತ್ವಾ ಹೊರಡಿಸಲಾಗಿದೆ. ಅದರಲ್ಲಿ ಮೊಬೈಲ್ ಫೋನ್ ಸಂಖ್ಯೆ ನಮೂದಿಸಲಾಗಿದೆ. ಎಲ್ಲಾ ಇಮಾಮ್‌ಗಳು ಮತ್ತು ಮಸೀದಿ ಅಧಿಕಾರಿಗಳಿಗೆ ಇದನ್ನು ರವಾನಿಸಲಾಗಿದೆ. ನನ್ನನ್ನು ಬಹಿಷ್ಕರಿಸುವಂತೆ ಫತ್ವಾದಲ್ಲಿ ಕೇಳಿಕೊಂಡಿದ್ದಾರೆ'' ಎಂದು ಇಲ್ಯಾಸಿ ಮಾಹಿತಿ ನೀಡಿದರು.
''ಫತ್ವಾದಲ್ಲಿ ನಾನು ಕ್ಷಮೆ ಯಾಚಿಸುವಂತೆ ಮತ್ತು ನನ್ನ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಅವರು ನನ್ನ ವಿರುದ್ಧ ಫತ್ವಾ ಹೊರಡಿಸಲು ಯಾವ ಘಟನೆ ಪ್ರೇರೇಪಿಸಿದೆ ಎಂಬುದು ಅವರಿಗೆ ಮಾತ್ರ ಗೊತ್ತು. ರಾಮ ಜನ್ಮಭೂಮಿ (ದೇವಾಲಯ) ಟ್ರಸ್ಟ್ ನನಗೆ ಆಹ್ವಾನ ಕಳುಹಿಸಿತ್ತು. ಅದನ್ನು ನಾನು ಸ್ವೀಕರಿಸಿದ್ದೆ. ಇದರ ನಂತರ ಎರಡು ದಿನಗಳ ಕಾಲ, ನಾನು ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಏಕೆಂದರೆ, ಇದು ನನ್ನ ಜೀವನದ ದೊಡ್ಡ ನಿರ್ಧಾರವಾಗಿತ್ತು. ಆದರೆ, ನಂತರದಲ್ಲಿ ನಾನು ಕೋಮು ಸೌಹಾರ್ದ, ದೇಶ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಯೋಚಿಸಿ ಅಯೋಧ್ಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ" ಎಂದು ಇಮಾಮ್ ಹೇಳಿದ್ದಾರೆ.
ಇದನ್ನೂ ಓದಿ: ಶಾಸಕರ ಖರೀದಿ ಆರೋಪ: ಆಪ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾದ ಬಿಜೆಪಿ