ನವದೆಹಲಿ: ದಿಲ್ಲಿ ಗಡಿಯಲ್ಲಿ ಪಂಜಾಬ್ ಮತ್ತು ಹರಿಯಾಣ ರೈತರು ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್ಪಿ) ಕಾನೂನು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಭಾರೀ ಹೋರಾಟ ನಡೆಸುತ್ತಿರುವ ನಡುವೆ ಕೇಂದ್ರ ಸರ್ಕಾರ, ಆಹಾರ ಭದ್ರತೆಗಾಗಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳ ಸಂಗ್ರಹ ಗುರಿಯನ್ನು ನಿಗದಿಪಡಿಸಿದೆ.
ಸರ್ಕಾರ ಪ್ರತಿವರ್ಷದಂತೆ ಈ ವರ್ಷವೂ ಆಹಾರ ಧಾನ್ಯಗಳ ಸಂಗ್ರಹಣೆಯ ಗುರಿ ಹಾಕಿಕೊಂಡಿದ್ದು, ಅದರಂತೆ ಗೋಧಿ, ಭತ್ತ, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರಿಂದ ಸಂಗ್ರಹಿಸಿ ಕಾಪಿಡುವ ನಿರ್ಧಾರ ತೆಗೆದುಕೊಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ರಾಜ್ಯ ಆಹಾರ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ ನಂತರ ವಿವಿಧ ಆಹಾರ ಧಾನ್ಯಗಳ ಸಂಗ್ರಹಣಾ ಗುರಿಯನ್ನು ನಿಗದಿಪಡಿಸಲಾಗಿದೆ.
ಯಾವ ಬೆಳೆ, ಎಷ್ಟು ನಿಗದಿ: ಆಹಾರ ಸಚಿವಾಲಯದ ಪ್ರಕಾರ, 2024-25ರ ಸಾಲಿನ ರಬಿ ಬೆಳೆಗಳ ಉತ್ಪಾದನೆಯ ಋತುವಿನಲ್ಲಿ 30 ರಿಂದ 32 ಮಿಲಿಯನ್ ಟನ್‌ಗಳಷ್ಟು ಗೋಧಿ ಸಂಗ್ರಹಣೆಯನ್ನ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗುರಿ ಹಾಕಿಕೊಂಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, 6 ಮಿಲಿಯನ್ ಟನ್ ಹೆಚ್ಚಳವಾಗಿದೆ. ಆದರೂ, 2023-24 ನೇ ಸಾಲಿನ ಬೆಳೆ ವರ್ಷದಲ್ಲಿ (ಜುಲೈ-ಜೂನ್) 114-115 ಮಿಲಿಯನ್ ಟನ್‌ಗಳಷ್ಟು ದಾಖಲೆಯ ಗೋಧಿ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಇದಕ್ಕೆ ಹೋಲಿಸಿದಲ್ಲಿ ಕಡಿಮೆ ಗುರಿಯನ್ನು ನಿಗದಿಪಡಿಸಲಾಗಿದೆ.
ಗೋಧಿಯ ಜೊತೆಗೆ, 9 ರಿಂದ 10 ಮಿಲಿಯನ್ ಟನ್‌ಗಳಷ್ಟು ಅಕ್ಕಿ, 6 ಮಿಲಿಯನ್ ಟನ್‌ಗಳಷ್ಟು ರಾಗಿ (ಶ್ರೀಅನ್ನ) ಸಂಗ್ರಹಣೆಯ ಗುರಿಯನ್ನು ಸರ್ಕಾರವು ನಿಗದಿಪಡಿಸಿದೆ. ಇದರೊಂದಿಗೆ ಬೇರೆ ಆಹಾರ ಬೆಳೆಗಳಿಗೂ ಇಂತಿಷ್ಟು ಪ್ರಮಾಣದಲ್ಲಿ ಸಂಗ್ರಹ ಗುರಿ ನಿಕ್ಕಿಯಾಗಿದೆ. ಪ್ರಮುಖವಾಗಿ ಸಭೆಯಲ್ಲಿ ಬೆಳೆಗಳ ವೈವಿಧ್ಯೀಕರಣ ಮತ್ತು ಆಹಾರದಲ್ಲಿ ಪೌಷ್ಟಿಕಾಂಶ ಕಾಪಾಡಲು ರಾಗಿ ಸಂಗ್ರಹಣೆಗೆ ಹೆಚ್ಚಿನ ಗಮನಹರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
2023-24ರ ಋತುವಿನಲ್ಲಿ ಸರ್ಕಾರವು 34.15 ದಶಲಕ್ಷ ಟನ್‌ಗಳ ಉತ್ಪಾದನೆಯ ಗುರಿಯಲ್ಲಿ ಸುಮಾರು 26.2 ದಶಲಕ್ಷ ಟನ್‌ಗಳಷ್ಟು ಗೋಧಿಯನ್ನು ಸಂಗ್ರಹಿಸಿದೆ. 2022-23ರಲ್ಲಿ 44.4 ಮಿಲಿಯನ್ ಟನ್‌ಗಳ ಉತ್ಪಾದನೆ ಗುರಿಯಲ್ಲಿ ಕೇವಲ 18.8 ಮಿಲಿಯನ್ ಟನ್‌ಗಳಷ್ಟನ್ನು ಮಾತ್ರ ಸಂಗ್ರಹಿಸಿತ್ತು. ಅತಿವೃಷ್ಟಿ, ಅನಾವೃಷ್ಟಿ, ಬೆಳೆ ನಷ್ಟ ಸೇರಿದಂತೆ ಹಲವು ಕಾರಣಕ್ಕಾಗಿ ಉತ್ಪಾದನೆ ಕುಸಿತದಿಂದಾಗಿ ಸಂಗ್ರಹಣೆಯೂ ಕಡಿಮೆಯಾಗಿತ್ತು.
ಇದನ್ನೂ ಓದಿ; ದಿಲ್ಲಿ ಚಲೋ ಹೋರಾಟದಲ್ಲಿ ರೈತ ಸಾವು: ಕೊಲೆ ಕೇಸ್ ದಾಖಲಿಸಿದ ಪಂಜಾಬ್ ಪೊಲೀಸರು