ಹೈದರಾಬಾದ್: ಮನೆಯಲ್ಲಿ ಪುತ್ರ ಸಾವಿಗೀಡಾಗಿದ್ದರೂ, ತಿಳಿಯದ ಅಂಧ ವೃದ್ಧ ದಂಪತಿ ಶವದೊಂದಿಗೆ ಮೂರು ದಿನ ಕಳೆದಿದ್ದಾರೆ. ದುರ್ವಾಸನೆ ಬೀರುತ್ತಿರುವುದನ್ನು ನೆರೆಹೊರೆಯವರು ಗಮನಿಸಿ ಪರಿಶೀಲಿಸಿದಾಗ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್ನ ನಾಗೋಲ್ ಪ್ರದೇಶದಲ್ಲಿ ಈ ಕರುಣಾಜನಕ ಕಥೆ ನಡೆದಿದೆ. ವೃದ್ಧ ದಂಪತಿಯಾದ ಕಾಲುವ ರಮಣ ಮತ್ತು ಪತ್ನಿ ಶಾಂತಿಕುಮಾರಿ ಅವರು ನಲವತ್ತು ವರ್ಷಗಳಿಂದ ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರೊಂದಿಗೆ ಕಿರಿಯ ಪುತ್ರ ಪ್ರಮೋದ್ (32) ಕೂಡ ಇರುತ್ತಿದ್ದ.
ವೃದ್ಧ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ತನ್ನ ಕುಟುಂಬದೊಂದಿಗೆ ಬೇರೆಡೆ ವಾಸಿಸುತ್ತಿದ್ದಾರೆ. ಕಿರಿಯನಾದ ಪ್ರಮೋದ್ಗೆ ವಿವಾಹವಾಗಿದ್ದರೂ, ಕಳೆದ ನಾಲ್ಕು ವರ್ಷಗಳಿಂದ ಪತ್ನಿಯಿಂದ ದೂರವಿದ್ದಾರೆ. ಇದರಿಂದ ಆತ ಕುಡಿತದ ಚಟಕ್ಕೆ ಬಿದ್ದಿದ್ದಾನೆ. ಮೂರು ದಿನಗಳ ಹಿಂದೆ ಆತ ಕುಡಿದ ಬಂದು ಮನೆಯಲ್ಲಿ ಮಲಗಿದ್ದ. ಈ ವೇಳೆ ಅಲ್ಲಿಯೇ ಆತ ಮೃತಪಟ್ಟಿದ್ದಾನೆ.
ಗುರುತಿಸದ ವೃದ್ಧ ದಂಪತಿ: ಪುತ್ರ ಮಲಗಿದ್ದಲ್ಲೇ ಸಾವಿಗೀಡಾಗಿದ್ದರೂ, ಇದು ವೃದ್ಧ ದಂಪತಿಯ ಗಮನಕ್ಕೆ ಬಂದಿಲ್ಲ. ಇದಕ್ಕೆ ಕಾರಣ ಅವರ ಕುರುಡು ಮತ್ತು ಮುದಿತನ. ಬಳಿಕ ಶವ ಕೊಳೆಯಲು ಆರಂಭಿಸಿ ಮನೆಯಿಂದ ದುರ್ವಾಸನೆ ಬೀರಿದೆ. ಇದನ್ನು ಅಕ್ಕಪಕ್ಕದವರು ಗಮನಿಸಿ, ಮನೆಯೊಳಗೆ ಬಂದು ನೋಡಿದ್ದಾರೆ. ಈ ವೇಳೆ ಪ್ರಮೋದ್ ಸಾವಿಗೀಡಾಗಿದ್ದು ಕಂಡುಬಂದಿದೆ. ತಕ್ಷಣವೇ ಸ್ಥಳೀಯರು ನಾಗೋಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವ್ಯಕ್ತಿ ಸಾವಿಗೀಡಾಗಿದ್ದನ್ನು ದೃಢಪಡಿಸಿದ್ದಾರೆ.
ಇನ್ನೂ, ಸರಿಯಾದ ವ್ಯವಸ್ಥೆ, ಅನ್ನ ಆಹಾರವಿಲ್ಲದೆ ವೃದ್ಧರು ಸೊರಗಿದ್ದು ಎಂಥವರ ಕರುಳನ್ನೂ ಹಿಂಡುವಂತಿತ್ತು. ಪೊಲೀಸರು ವೃದ್ಧರಿಗೆ ಊಟದ ವ್ಯವಸ್ಥೆ ಮಾಡಿ ಬಳಿಕ ಪುತ್ರನ ಸಾವಿನ ಬಗ್ಗೆ ತಿಳಿಸಿದ್ದಾರೆ. ಇಳಿಯ ವಯಸ್ಸಿನಲ್ಲಿ ಪುತ್ರನ ಮರಣ ಶೋಕ ಅವರಲ್ಲಿ ಕಣ್ಣೀರು ತರಿಸಿದೆ.
ಹಿರಿಯ ಪುತ್ರನ ಸಂಪರ್ಕ ಸಂಖ್ಯೆ ಪಡೆದ ಪೊಲೀಸರು ಮಾಹಿತಿ ನೀಡಿ ಕರೆಸಿದ್ದಾರೆ. ಬಳಿಕ ಆತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಕೊಂಡ ಪೊಲೀಸರು, ಮೃತದೇಹವನ್ನು ಮುಂದಿನ ಪ್ರಕ್ರಿಯೆಗಾಗಿ ಉಸ್ಮಾನಿಯಾ ಶವಾಗಾರಕ್ಕೆ ರವಾನಿಸಿದ್ದಾರೆ.
ಇದನ್ನೂ ಓದಿ: 95 ಕೆ.ಜಿ ಮೆಥಾಂಫೆಟಮೈನ್ ಡ್ರಗ್ಸ್ ವಶ: ಮೆಕ್ಸಿಕೊ ಪ್ರಜೆ, ಜೈಲು ವಾರ್ಡನ್ ಬಂಧನ