ಗ್ಯಾಂಗ್ಟಕ್/ಇಟಾನಗರ: ಅರುಣಾಚಲ ಪ್ರದೇಶದ 60 ಮತ್ತು ಸಿಕ್ಕೀಂನ 32 ಸ್ಥಾನಗಳಿಗೆ ಏಪ್ರಿಲ್ 19 ರಂದು ನಡೆದಿದ್ದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಸಾಗುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇದುವರೆಗೆ 41 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಉಳಿದ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಉಳಿದಂತೆ ಕಾಂಗ್ರೆಸ್ ಏಕೈಕ ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಉಪಮುಖ್ಯಮಂತ್ರಿ ಚೌನಾ ಮೇನ್ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. "ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಅರುಣಾಚಲ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು ಲುಮ್ಲಾ, ಕಲಾಕ್ಟಾಂಗ್, ಕೊಲೋರಿಯಾಂಗ್, ನಾಚೋ ಸೇರಿದಂತೆ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಲಿಕಾಬಲಿ, ಬಾಸರ್, ಅಲಾಂಗ್ (ಪಶ್ಚಿಮ), ಅಲಾಂಗ್ (ಪೂರ್ವ)ಗಳಲ್ಲಿ ಇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಸರ್ಕಾರ ರಚನೆಯಾಗಲು 31 ಮ್ಯಾಜಿಕ್ ನಂಬರ್ ಆಗಿದೆ.
ಮತ್ತೊಂದೆಡೆ ಸಿಕ್ಕೀಂನಲ್ಲೂ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುನ್ನಡೆ ಸಾಧಿಸಿದ್ದು ಒಟ್ಟು 32 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಗೆದ್ದು ಮುನ್ನುಗ್ಗುತ್ತಿದೆ. ಉಳಿದಂತೆ ಎಸ್‌ಕೆಎಂ 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, SDF ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕೀಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಪಕ್ಷವು 32 ಸ್ಥಾನಗಳಲ್ಲಿ ಮುನ್ನಡೆಯುತ್ತಿರುವುದರಿಂದ ಮತ್ತೆ ಜಯಭೇರಿ ಬಾರಿಸುವ ಸಾಧ್ಯತೆ ಗೋಚರಿಸತೊಡಗಿವೆ. ಉಳಿದಂತೆ ಪ್ರತಿಪಕ್ಷ ಸಿಕ್ಕೀಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಸಿಕ್ಕೀಂನಲ್ಲಿ 32 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಏಕಕಾಲದಲ್ಲಿ ಮತದಾನ ನಡೆದಿತ್ತು.