ಪಾಟ್ನಾ (ಬಿಹಾರ): ಬಿಹಾರ ರಾಜಕೀಯ ವಿಪ್ಲವ ಮತ್ತೊಂದು ಘಟ್ಟ ತಲುಪಿದೆ. ಮೈತ್ರಿ ಪಕ್ಷ ಆರ್‌ಜೆಡಿ ಸಚಿವರ ನಡೆಗಳಿಂದ ಬೇಸತ್ತಿರುವ I.N.D.I.A ಕೂಟದ ಪ್ರಮುಖ ನಾಯಕ, ಬಿಹಾರ ಸಿಎಂ ನಿತೀಶ್ಕುಮಾರ್ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಂದೇ ಬಿಜೆಪಿ ಜೊತೆ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ. ಸರ್ಕಾರದ ಭಾಗವಾಗಿರುವ ಆರ್‌ಜೆಡಿ ಈಗಾಗಲೇ ನಿತೀಶ್ಕುಮಾರ್ ಜೊತೆಗೆ ಅಂತರ ಕಾಯ್ದುಕೊಂಡಿದೆ. ನಿನ್ನೆ ನಡೆದ ರಾಜ್ಯಪಾಲರ ಚಹಾ ಕೂಟಕ್ಕೂ ಗೈರಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಸರ್ಕಾರ ವಿಸರ್ಜನೆಯಾಗುವ ಸಾಧ್ಯತೆ ದಟ್ಟವಾಗಿದೆ.
ಸಿಎಂ ನಿವಾಸದಲ್ಲಿ ಸರಣಿ ಸಭೆ: ಎಲ್ಲ ಜೆಡಿಯು ಶಾಸಕರಿಗೆ ರಾಜಧಾನಿ ಪಾಟ್ನಾಗೆ ಬರುವಂತೆ ಸೂಚಿಸಿರುವ ಸಿಎಂ ನಿತೀಶ್ಕುಮಾರ್, ಇಂದು (ಶನಿವಾರ) ತಮ್ಮ ನಿವಾಸದಲ್ಲಿ ಎಲ್ಲರ ಜೊತೆ ಸಭೆ ಕರೆದಿದ್ದಾರೆ. ಈಗಾಗಲೇ ಹಲವು ಹಿರಿಯ ನಾಯಕರ ಜೊತೆಗೆ ಮಾತುಕತೆ ನಡೆಸಿರುವ ಸಿಎಂ ಮುಂದಿನ ನಡೆಯನ್ನು ರಹಸ್ಯವಾಗಿಟ್ಟಿದ್ದಾರೆ.
ನಾಳೆ ರಾಜೀನಾಮೆ, ಸರ್ಕಾರ ರಚನೆ: ಮೂಲಗಳ ಮಾಹಿತಿಯ ಪ್ರಕಾರ, ನಿತೀಶ್ ಕುಮಾರ್ ಅವರು ಇಂದು ರಾಜೀನಾಮೆ ನೀಡುವುದಿಲ್ಲ. ನಾಳೆ ಬೆಳಗ್ಗೆ 10 ಗಂಟೆಗೆ ತಮ್ಮ ನಿವಾಸದಲ್ಲಿ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 12 ಗಂಟೆಯೊಳಗೆ ರಾಜೀನಾಮೆ ನೀಡಬಹುದು. ಜೊತೆಗೆ ಬಿಜೆಪಿಯ ಬೆಂಬಲದೊಂದಿಗೆ ಮತ್ತೆ ಸರ್ಕಾರ ರಚನೆಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಬಹುದು ಎಂದು ತಿಳಿದು ಬಂದಿದೆ.
ರಾಜ್ಯಪಾಲರು ಸಮ್ಮತಿ ನೀಡಿದಲ್ಲಿ ಶನಿವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂಬ ಮಾಹಿತಿಯೂ ಇದೆ. ಇಂದು ರಾತ್ರಿಯೊಳಗೆ ಬಿಜೆಪಿ ನಿತೀಶ್ಕುಮಾರ್ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಲಿದೆ.
ಇಂದು ಬಿಜೆಪಿ ಶಾಸಕಾಂಗ ಸಭೆ: ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ನೂತನ ಸರ್ಕಾರದ ಭಾಗವಾಗಲು ಮತ್ತು ಡಿಸಿಎಂ, ಯಾವೆಲ್ಲಾ ಸಚಿವ ಸ್ಥಾನಗಳಿಗೆ ಬೇಡಿಕೆ ಇಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ತನ್ನ ಶಾಸಕರಿಂದ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಸಹಿ ಸಂಗ್ರಹ ಮಾಡಲಿದೆ.
ಪಕ್ಷಗಳ ಸಂಖ್ಯಾಬಲ ಹೇಗಿದೆ?: ಬಿಹಾರ ವಿಧಾನಸಭೆಯು 243 ಶಾಸಕ ಬಲ ಹೊಂದಿದೆ. ಇದರಲ್ಲಿ ಬಹುಮತಕ್ಕೆ 122 ಅಗತ್ಯವಿದೆ. ಪಕ್ಷವಾರು ಲೆಕ್ಕಾಚಾರದಲ್ಲಿ ಪ್ರಸ್ತುತ ಬಿಜೆಪಿ 78 ಶಾಸಕರನ್ನು ಹೊಂದಿದೆ. ನಿತೀಶ್ಕುಮಾರ್ ನೇತೃತ್ವದ ಜೆಡಿಯು 45 ಶಾಸಕರು, ಜಿತನ್ ರಾಮ್ ಮಾಂಝಿ ಅವರ ಪಕ್ಷದ ಹೆಚ್ಎಎಂ 4, ಆರ್‌ಜೆಡಿ 79, ಕಾಂಗ್ರೆಸ್ 19, ಎಡಪಕ್ಷಗಳು 16, ಎಐಎಂಐಎಂ 1 ಮತ್ತು ಒಬ್ಬ ಸ್ವತಂತ್ರ ಶಾಸಕರು ಇದ್ದಾರೆ.
ಇದನ್ನೂ ಓದಿ: ನಿತೀಶ್ ನಿರ್ಗಮನವು ಮೈತ್ರಿಕೂಟದ ಮೇಲೆ ಹೆಚ್ಚಿನ ಪರಿಣಾಮವಾಗದು: ಮಮತಾ ಬ್ಯಾನರ್ಜಿ