ಮೂರು ವರ್ಷಗಳ ಹಿಂದೆ ನೀವೇನಾದರೂ ಭಾರತದ ಬೇರೆ ರಾಜ್ಯಗಳಲ್ಲಿ ನೆಲೆಸಬೇಕೆಂದರೆ, ನೀವು ನಿಮ್ಮ ವಾಹನವನ್ನು ಮತ್ತೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕಾಗಿತ್ತು. ಮೋಟಾರು ವಾಹನಗಳ ಕಾಯ್ದೆಯ ಪ್ರಕಾರ, ನೋಂದಣಿ ಪ್ರಾಧಿಕಾರದಿಂದ ನಿಯೋಜಿಸಲಾದ ಹೊಸ ನೋಂದಣಿ ಮಾರ್ಕ್ ಅನ್ನು ಪಡೆಯದೆ ನೋಂದಾಯಿಸದ ರಾಜ್ಯಗಳಲ್ಲಿ 12 ತಿಂಗಳುಗಳಿಗಿಂತ ಹೆಚ್ಚು ಕಾಲ ಪ್ರಯಾಣಿಕ ವಾಹನವನ್ನು ಓಡಿಸಲು ಸಾಧ್ಯವಿರಲಿಲ್ಲ. ಒಂದು ವೇಳೆ ನೀವು ರಿಜಿಸ್ಟ್ರೇಷನ್ ಮಾಡಿಸದೇ ಓಡಿಸಿದಲ್ಲಿ ಭಾರೀ ಮೊತ್ತದ ದಂಡ ಪಾವತಿಸಬೇಕಾಗಿತ್ತು.
ಅದರ ಜೊತೆಗೆ ಆ ಮರು ರಿಜಿಸ್ಟ್ರೇಷನ್ ಕಾರು ಮಾಲೀಕರಿಗೆ ಸಾಕಷ್ಟು ಸಮಯ ಹಾಗೂ ಕಿರಿಕಿರಿ ಉಂಟುಮಾಡುವ ಪ್ರಕ್ರಿಯೆಯಾಗಿತ್ತು. ಆದರೆ 2021ರಲ್ಲಿ ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ಇದನ್ನು ಪರಿವರ್ತಿಸಿ, ಭಾರತದಾದ್ಯಂತ ಭಾರತ್ (BH) ಸರಣಿಯ ನಂಬರ್ ಪ್ಲೇಟ್‌ಗಳನ್ನು ಪ್ರಾರಂಭಿಸಿತು. ಭಾರತ್ ಸಿರೀಸ್ ನಂಬರ್ ಪ್ಲೇಟ್ಗಳ ಪರಿಚಯದಿಂದಾಗಿ ವಾಹನ ಮಾಲೀಕರು ಹೊಸ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ತೆರಳುವಾಗ ತಮ್ಮ ವಾಹನಗಳನ್ನು ಮರು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. BH ಸರಣಿ ನಂಬರ್ ಪ್ಲೇಟ್ ಇದ್ದರೆ ಪ್ಯಾನ್ ಇಂಡಿಯಾ ವ್ಯಾಪ್ತಿಯಲ್ಲಿ ವಾಹನ ಓಡಿಸುವ ಅವಕಾಶ ನಿಮ್ಮದಾಗಲಿದೆ.
BH ಸರಣಿ ನಂಬರ್ ಪ್ಲೇಟ್ ಪಡೆಯಲು ಯಾರು ಅರ್ಹರು?: ನೀವು ಭಾರತೀಯ ಪ್ರಜೆಯಾಗಿದ್ದರೆ, ವಿಶೇಷವಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರ, ಬ್ಯಾಂಕ್ಗಳು, ರಕ್ಷಣಾ, ಆಡಳಿತ ಸೇವೆ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಿದ್ದರೆ BH ಸರಣಿಯ ಪರವಾನಗಿ ಫಲಕ ಪಡೆಯಲು ಅರ್ಹರು. ಬೇರೆ ಬೇರೆ ರಾಜ್ಯಗಳಿಗೆ ಆಗಾಗ ಪ್ರಯಾಣಿಸುವವರೂ ಅರ್ಜಿ ಸಲ್ಲಿಸಬಹುದು. BH ನಂಬರ್ ಪ್ಲೇಟ್ ಪಡೆದ ನಂತರ ಯಾವುದೇ ರಾಜ್ಯಕ್ಕೆ ಹೋಗುವಾಗ ಸಾರಿಗೆ ಇಲಾಖೆ ನೀಡುವ ನಂಬರ್ ಪ್ಲೇಟ್ ಪಡೆಯುವ ಅಗತ್ಯವಿಲ್ಲ.
ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್ಯು) ಉದ್ಯೋಗಿಗಳು ಮತ್ತು ಕನಿಷ್ಠ ನಾಲ್ಕು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ಸಹ ಈ ನಂಬರ್ ಪ್ಲೇಟ್ ಪಡೆಯಲು ಅರ್ಜಿ ಸಲ್ಲಿಸಬಹುದು. ಸರ್ಕಾರ BH ಸರಣಿಯ ನಂಬರ್ ಪ್ಲೇಟ್ ಪರಿಚಯಿಸಿದಾಗ ಇದು ಹೊಸ ಕಾರಿನ ಮಾಲೀಕರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಒಂದು ವರ್ಷದ ನಂತರ ಹಳೆಯ ಕಾರು ಮಾಲೀಕರು ತಮ್ಮ ವಾಹನಗಳನ್ನು BH ಸರಣಿಯ ಅಡಿಯಲ್ಲಿ ನೋಂದಾಯಿಸಬಹುದು ಎಂದು ಸರ್ಕಾರ ಘೋಷಿಸಿತು.
ಅರ್ಜಿ ಸಲ್ಲಿಸುವುದು ಹೇಗೆ?: ಹೊಸ ಕಾರು ಅಥವಾ ಯಾವುದೇ ವಾಹನ ಖರೀದಿಸುವ ಸಂದರ್ಭದಲ್ಲಿ ಈ ನಂಬರ್ ಪ್ಲೇಟ್ ಪಡೆಯಬಹುದು. ನೀವು ಇದಕ್ಕೆ ಅಧಿಕೃತ ವಾಹನ ಡೀಲರ್ ಅನ್ನು ಸಂಪರ್ಕಿಸಬೇಕು. ವಾಹನ ಮಾರಾಟ ಮಾಡುವವರ ಬಳಿ BH ನಂಬರ್ ಬೇಕಾಗಿರುವುದಾಗಿ ತಿಳಿಸಿ. ಆಗ ವಾಹನ ಡೀಲರ್ ನಿಮ್ಮ ಪರವಾಗಿ Vahan ಪೋರ್ಟಲ್‌ನಲ್ಲಿ BH ನಂಬರ್ ಪ್ಲೇಟ್ಗಾಗಿ ಅರ್ಜಿ ಸಲ್ಲಿಸುತ್ತಾರೆ. ನಂತರ ಈಗಾಗಲೇ ನಿಮ್ಮ ಬಳಿ ಕಾರು ಇದ್ದು, ಅದನ್ನು ಕೂಡ ಭಾರತ್ ಸರಣಿಯ ನಂಬರ್ ಪ್ಲೇಟ್ಗೆ ಅಪ್ಡೇಟ್ ಮಾಡುವ ಅವಕಾಶ ನಿಮಗಿದೆ. ಈಗಾಗಲೇ ವಾಹನ ಹೊಂದಿರುವವರು Vahan ಪೋರ್ಟಲ್‌ನಲ್ಲಿ BH ನಂಬರ್ ಪ್ಲೇಟ್ಗಾಗಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಪೋರ್ಟಲ್‌ನಲ್ಲಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಅಗತ್ಯವಿರುವ ಪ್ರಮಾಣಪತ್ರಗಳು ಹಾಗೂ ವಾಹನ ದಾಖಲೆಗಳನ್ನು ಸಲ್ಲಿಸಬೇಕು.
ಒಂದಷ್ಟು ಖರ್ಚು, ಒಂದಷ್ಟು ಉಳಿತಾಯ: ವಾಹನ ಖರೀದಿ ಸಮಯದಲ್ಲೇ ನೀವು BH ಸರಣಿಯ ನಂಬರ್ ಪ್ಲೇಟ್ ಪಡೆಯಲು ಬಯಸಿದರೆ, ಅದರ ವೆಚ್ಚ ವಾಹನದ ಎಕ್ಸ್ ಶೋರೂಂ ಬೆಲೆಯ ಮೇಲೆ ಅವಲಂಬಿಸಿರುತ್ತದೆ. ಎಲೆಕ್ಟ್ರಿಕ್ ವಾಹನಗಳ ಎಕ್ಸ್ ಶೋರೂಂ ಬೆಲೆಯ ಶೇಕಡಾ 6ರಷ್ಟು ಮೊತ್ತವನ್ನು ಬಿಹೆಚ್ ಸರಣಿಯ ನಂಬರ್ ಪ್ಲೇಟ್ಗೆ ವಿಧಿಸಲಾಗುತ್ತದೆ. 20 ಲಕ್ಷಕ್ಕಿಂತ ಹೆಚ್ಚು ಬೆಲೆಯ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ, ಅದರ ಎಕ್ಸ್ ಶೋ ರೂಂ ಬೆಲೆಯ ಶೇ.12ರಷ್ಟು ಹಣವನ್ನು ಬಿಹೆಚ್ ಸರಣಿಯ ನಂಬರ್ ಪ್ಲೇಟ್ಗೆ ನೀಡಬೇಕಾಗುತ್ತದೆ.
ಆದರೆ ಪ್ರಾರಂಭದಲ್ಲಿ ಇಷ್ಟು ದೊಡ್ಡ ಮೊತ್ತ ಪಾವತಿಸುವುದು ಸ್ವಲ್ಪ ಕಷ್ಟವೆನಿಸಬಹುದು. ಆದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಿಯಮಿತವಾಗಿ ಪ್ರಯಾಣಿಸುವ ಜನರು ಈ ನಂಬರ್ ಪ್ಲೇಟ್ ತೆಗೆದುಕೊಳ್ಳುತ್ತಾರೆ. ಈ ನಂಬರ್ ಪ್ಲೇಟ್ ಪಡೆಯುವುದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಆಯಾ ರಾಜ್ಯಗಳ ಸಾರಿಗೆ ಇಲಾಖೆ ಕಚೇರಿಗಳನ್ನು ಅಲೆಯುವ ಅಗತ್ಯವಿಲ್ಲ. ಇದರಿಂದ ವಾಹನ ಖರೀದಿಸುವಾಗ BH ನಂಬರ್ ಪ್ಲೇಟ್ಗೆ ವ್ಯಯಿಸುವ ವೆಚ್ಚಕ್ಕಿಂತ ಹೆಚ್ಚಿನ ಅನುಕೂಲ ವಾಹನ ಮಾಲೀಕರಿಗೆ ಆಗುತ್ತದೆ.
ರಸ್ತೆ ತೆರಿಗೆ ಉಳಿತಾಯ- ಕಾರು ವಿಮೆಗೂ ಸಹಕಾರಿ: BH ಸರಣಿಯ ಪರವಾನಗಿ ಪ್ಲೇಟ್ ಖರೀದಿಸುವಾಗ ಕಾರು ಮಾಲೀಕರು ರಾಜ್ಯದೊಳಗಿನ ತೆರಿಗೆ ಸಹ ಉಳಿಸಬಹುದು. ಹೊಸ ಕಾರನ್ನು ಖರೀದಿಸಿ, ನೋಂದಾಯಿಸುವಾಗ ನೀವು 15 ವರ್ಷಗಳ ವರೆಗೆ ರಸ್ತೆ ತೆರಿಗೆಯನ್ನು ಒಂದೇ ಬಾರಿ ಪಾವತಿಸಬೇಕಾಗುತ್ತದೆ. ಆದರೆ BH ಸರಣಿಯ ನಂಬರ್ ಪ್ಲೇಟ್ ಹೊಂದಿರುವ ಖಾಸಗಿ ವಾಹನಗಳು ನಾಲ್ಕು, ಆರು ಅಥವಾ ಎಂಟು ವರ್ಷಗಳು ಸೇರಿದಂತೆ ಎರಡು ವರ್ಷಗಳ ವರೆಗೆ ತೆರರಿಗೆ ಪಾವತಿಸಬಹುದು. ರಸ್ತೆ ತೆರಿಗೆಯನ್ನು 14 ವರ್ಷಗಳವರೆಗೆ ಆನ್ಲೈನ್ ಮೂಲಕ ಪಾವತಿಸಬಹುದು. 14 ವರ್ಷಗಳ ನಂತರ ವಾರ್ಷಿಕ ರಸ್ತೆ ತೆರಿಗೆ ಪಾವತಿ ಕಡ್ಡಾಯ.
ಭಾರತ್ ಸರಣಿ ನಂಬರ್ ಪ್ಲೇಟ್ ಪಡೆಯುವುದರಿಂದ ತೆರಿಗೆ ಉಳಿಸುವುದು ಮಾತ್ರವಲ್ಲ, ರಸ್ತೆ ನಿಯಮಗಳನ್ನು ಅನುಸರಿಸದ ಕಾರಣ, ವಿಮೆ ಕ್ಲೈಮ್ ತಿರಸ್ಕಾರ ಆಗುವುದನ್ನೂ ತಪ್ಪಿಸುತ್ತದೆ. ಹೊಸ ರಾಜ್ಯಕ್ಕೆ ತೆರಳಿದಾಗ ನಿಮ್ಮ ಕಾರು ಪಾಲಿಸಿಯನ್ನು ನವೀಕರಿಸುವ ಅಗತ್ಯವಿಲ್ಲ. ನೀವು ಹೊಸ ರಾಜ್ಯಕ್ಕೆ ಸ್ಥಳಾಂತರಗೊಂಡರೂ ನಿಮ್ಮ ಅಸ್ತಿತ್ವದಲ್ಲಿರುವ ವಿಮಾ ಪಾಲಿಸಿ ಮಾನ್ಯವಾಗಿರುತ್ತದೆ.
ಒಟ್ಟಾರೆಯಾಗಿ BH ಸರಣಿಯ ನಂಬರ್ ಪ್ಲೇಟ್ ನಮ್ಮ ದೇಶದಲ್ಲಿ ವಾಹನ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವತ್ತ ಒಂದು ಮಹತ್ವದ ಹೆಜ್ಜೆ. ಈ ನಂಬರ್ ಪ್ಲೇಟ್ ವಾಹನಗಳಿಗೆ ರಾಷ್ಟ್ರವ್ಯಾಪಿ ಮಾನ್ಯತೆ ಒದಗಿಸುತ್ತದೆ.
ಇದನ್ನೂ ಓದಿ: ಆಟೋಮ್ಯಾಟಿಕ್ V/s ಮ್ಯಾನುವಲ್ ಕಾರು: ಭಾರತೀಯರು ಯಾವುದನ್ನು ಹೆಚ್ಚು ಖರೀದಿಸುತ್ತಾರೆ ಮತ್ತು ಏಕೆ?