ಢಾಕಾ, ಬಾಂಗ್ಲಾದೇಶ: 15 ವರ್ಷ ಕಾಲ ಸುದೀರ್ಘವಾಗಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಶೇಖ್ ಹಸೀನಾ ಅವರ ಪಲಾಯನದ ಬಳಿಕ ಗಲಭೆ ಪೀಡಿತ ಬಾಂಗ್ಲಾದೇಶದಲ್ಲಿ ಅಶಾಂತಿ ಮತ್ತಷ್ಟು ಭುಗಿಲೆದ್ದಿದೆ. ದೇಶದ ಅವಳಿ ಜೈಲಿನಲ್ಲಿ 12 ಕೈದಿಗಳ ಕೊಲೆ ನಡೆದಿದ್ದು, ನೂರಾರು ಕೈದಿಗಳು ಪರಾರಿಯಾಗಿರುವುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಹಸೀನಾ ಅವರ ಹಠಾತ್ ರಾಜೀನಾಮೆ ಮತ್ತು ಪಲಾಯನದ ಬಳಿಕ, ದೇಶಾದ್ಯಂತ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಉದ್ರಿಕ್ತರ ಗುಂಪುಗಳನ್ನು ಹತ್ತಿಕ್ಕುವಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಇನ್ನಿಲ್ಲದ ಹರಸಾಹಸ ಪಡುವಂತಾಗಿದೆ. ರಾಜಧಾನಿ ಢಾಕಾದ ಉತ್ತರ ಭಾಗದಲ್ಲಿನ ಅವಳಿ ಜೈಲಿನಲ್ಲಿ ಇದೇ ವಾರ 12 ಕೈದಿಗಳ ಕೊಲೆ ನಡೆದಿದೆ. ನೂರಾರು ಕೈದಿಗಳು ಜೈಲಿನಿಂದ ಪರಾರಿಯಾಗಿರುವ ವರದಿಯಾಗಿದೆ.
"ಉದ್ರಿಕ್ತರ ಗುಂಪುಗಳ ದಾಳಿಯಿಂದ ಗುರುವಾರಷ್ಟೇ ಜಮಾಪುರ ಜೈಲಿನಲ್ಲಿದ್ದ ಆರು ಕೈದಿಗಳ ಕೊಲೆ ನಡೆದಿದೆ. ಉದ್ರಿಕ್ತರು ನಮ್ಮ ಮೇಲೂ ಕಬ್ಬಿಣದ ರಾಡ್ ಮತ್ತು ಹರಿತವಾದ ಆಯುಧಗಳಿಂದ ದಾಳಿ ಮಾಡಿದರು. ಬೆಂಕಿ ಹಚ್ಚಿ ಠಾಣೆಯನ್ನು ಧ್ವಂಸ ಮಾಡಿದರು. 600 ಕೈದಿಗಳನ್ನು ಉದ್ರಿಕ್ತರು ತಮ್ಮೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದರು. ಈ ವೇಳೆ, ನಾವು ಗುಂಡಿನ ದಾಳಿ ನಡೆಸಿದೆವು. ಪ್ರತಿಯಾಗಿ ಅವರು ದಾಳಿ ನಡೆಸಿದರು. ಸಂಘರ್ಷದಲ್ಲಿ ಆರು ಕೈದಿಗಳು ಹತರಾದರು. ಒಬ್ಬನನ್ನು ಇರಿದು ಕೊಲ್ಲಲಾಯಿತು. ದಾಳಿಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದರೂ ಹಲವರು ಪರಾರಿಯಾದರು" ಎಂದು ಜೈಲಿನ ವಾರ್ಡನ್ ಅಬು ಫತಾಹ್ ಅಸಹಾಯಕತೆ ವ್ಯಕ್ತಪಡಿಸಿದರು.
ಆರು ಕೈದಿಗಳಿಗೆ ಗುಂಡಿಕ್ಕಿದ ಉದ್ರಿಕ್ತರು: "ಮತ್ತೊಂದೆಡೆ ಢಾಕಾದ ಉತ್ತರದಲ್ಲಿರುವ ಕಾಶಿಂಪುರದ ಹೈ-ಸೆಕ್ಯುರಿಟಿ ಜೈಲಿನಲ್ಲಿ ಮಂಗಳವಾರ ಆರು ಕೈದಿಗಳನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಘರ್ಷಣೆಯಲ್ಲಿ ಕಾವಲುಗಾರರ ಮೇಲೆ ಕಬ್ಬಿಣದ ರಾಡ್ಗಳಿಂದ ದಾಳಿ ನಡೆಸಿದ ಕೈದಿಗಳು, ಜೈಲಿನ ಮುಖ್ಯ ದ್ವಾರವನ್ನು ಭೇದಿಸಿ ಕನಿಷ್ಠ 203 ಕೈದಿಗಳು ಪರಾರಿಯಾಗಿದ್ದಾರೆ. ಕಾಶಿಂಪುರದ ಹೈ-ಸೆಕ್ಯುರಿಟಿ ಜೈಲು ಇಸ್ಲಾಮಿಕ್ ಉಗ್ರರು ಮತ್ತು ಕೊಲೆಗಾರರು ಸೇರಿದಂತೆ ಬಾಂಗ್ಲಾದೇಶದ ಕೆಲವು ಕುಖ್ಯಾತ ಅಪರಾಧಿಗಳನ್ನು ಹೊಂದಿದೆ. ಆದರೆ, ಅಂತಹ ಯಾವುದೇ ಕೈದಿಗಳು ತಮ್ಮ ಸೆಲ್‌ಗಳಿಂದ ಹೊರಬರಲು ಸಾಧ್ಯವಾಗಿಲ್ಲ" ಎಂದು ವಾರ್ಡನ್ ಲುಟ್ಫೋರ್ ರಹಮಾನ್ ತಿಳಿಸಿದ್ದಾರೆ.
ಮೀಸಲಾತಿಗಾಗಿ, ಭ್ರಷ್ಟಾಚಾರ ಮತ್ತು ನಿರಂಕುಶಾಧಿಕಾರ ವಿರೋಧಿಸಿ ಬಾಂಗ್ಲಾದೇಶದಾದ್ಯಂತ ಕಳೆದ ತಿಂಗಳಿನಿಂದ ಪ್ರಾರಂಭವಾದ ಹೋರಾಟ ಮತ್ತು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಸಾವು-ನೋವುಗಳಿಗೆ ಸಾಕ್ಷಿಯಾಗಿದೆ. ಉದ್ರಿಕ್ತರ ಗುಂಪುಗಳು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದು ಸುಟ್ಟು ಹಾಕಿವೆ. ಜುಲೈ ಆರಂಭದಲ್ಲಿ ಬ್ರಿಟೀಷ್ ವಸಾಹತುಶಾಹಿ ಯುಗದ ಸಂಸ್ಥೆಯ ಮೇಲೆ ಸಾವಿರಾರು ಜನರ ಗುಂಪು ದಾಳಿ ಮಾಡಿ ವಾರ್ಡನ್ ಕಚೇರಿಗೆ ಬೆಂಕಿ ಹಚ್ಚಿದೆ.
ಈ ವೇಳೆ 800ಕ್ಕೂ ಹೆಚ್ಚು ಕೈದಿಗಳು ಕೇಂದ್ರ ಜಿಲ್ಲೆಯ ನರಸಿಂಗಡಿಯ ಜೈಲಿನಿಂದ ಪರಾರಿಯಾಗಿದ್ದಾರೆ. ಹಸೀನಾ ಅವರನ್ನು ಉಚ್ಚಾಟಿಸಿದ ದಿನವೇ 500ಕ್ಕೂ ಹೆಚ್ಚು ಕೈದಿಗಳು ಉತ್ತರ ಜಿಲ್ಲೆಯ ಶೆರ್‌ಪುರದ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ 450ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಪೊಲೀಸ್ ಯೂನಿಯನ್‌ಗಳು ತಮ್ಮ ಸುರಕ್ಷತೆಗಾಗಿ ಮಂಗಳವಾರ ಮುಷ್ಕರ ಸಹ ಘೋಷಿಸಿವೆ.
ಇದನ್ನೂ ಓದಿ: ದೆಹಲಿಗೆ ಬಂದಿಳಿದ ಶೇಖ್ ಹಸೀನಾ, ಇಲ್ಲಿಂದ ಲಂಡನ್ಗೆ ಪ್ರಯಾಣ: ಢಾಕಾಗೆ ರೈಲು-ವಿಮಾನ ಸೇವೆ ಬಂದ್ - Sheikh Hasina