ಕೋಝಿಕ್ಕೋಡ್(ಕೇರಳ): ಮದುವೆ ಮದರಂಗಿ ಬಣ್ಣ ಕಳೆದುಕೊಳ್ಳುವ ಮೊದಲೇ ಪತಿ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದಾಗ ತಾನು ಕಾರ್ಯ ನಿರ್ವಹಿಸುತ್ತಿದ್ದ ಜರ್ಮನಿ ದೇಶಕ್ಕೆ ಪರಾರಿಯಾಗಿದ್ದಾನೆ. ಆರೋಪಿ ವಿರುದ್ಧ ಇಂಟರ್ಫೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
ಈ ಕುರಿತು ಮಾತನಾಡಿರುವ ಕೋಝಿಕ್ಕೋಡ್ ನಗರ ಪೊಲೀಸರು, ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇದು ಗುರುವಾರದಿಂದ ಜಾರಿಗೆ ಬಂದಿದೆ. ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕ ಇಂಟರ್ಪೋಲ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಬಗ್ಗೆ ಸದಸ್ಯ ರಾಷ್ಟ್ರಗಳಿಂದ ಹೆಚ್ಚುವರಿ ಮಾಹಿತಿ ಸಂಗ್ರಹಿಸಲು ಇಂಟರ್‌ಪೋಲ್ ಅಂತಾರಾಷ್ಟ್ರೀಯ ಪೊಲೀಸ್ ಸಹಕಾರ ಸಂಸ್ಥೆಯಿಂದ ಬ್ಲೂ ಕಾರ್ನರ್ ನೋಟಿಸ್ ನೀಡಲಾಗುತ್ತದೆ. ಆರೋಪಿ ಪತಿ ರಾಹುಲ್ ಪಿ.ಗೋಪಾಲ್ ವಿರುದ್ಧ ಪೊಲೀಸರು ಲುಕ್‌ಔಟ್ ಸುತ್ತೋಲೆ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಬ್ಲೂ ಕಾರ್ನರ್ ನೋಟಿಸ್ ಬಂದಿದೆ ಎಂದು ಮಾಹಿತಿ ನೀಡಿದರು.
ಪ್ರಕರಣದ ವಿವರ: ಮೇ 5ರಂದು ರಾಹುಲ್ ಗೋಪಾಲ್ ಎಂಬಾತನ ಮದುವೆ ನಡೆದಿದೆ. ಮದುವೆಯಾದ ವಾರಕ್ಕೆ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಹೆಂಡತಿಯೊಂದಿಗಿನ ವಾಗ್ವಾದದಲ್ಲಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಜೊತೆಗೆ ಕೊಲೆಗೂ ಯತ್ನಿಸಿದ್ದಾನೆ. ಈ ಘಟನೆ ಸಂಬಂಧ ವಧು ಮತ್ತು ಕುಟುಂಬ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಕೇರಳದಲ್ಲಿ ತಲ್ಲಣ ಸೃಷ್ಟಿಸಿದೆ.
ಆದರೆ, ಘಟನೆ ಕುರಿತು ಆರೋಪಿ ರಾಹುಲ್ ಕುಟುಂಬ ಮಾತ್ರ ತಾವು ಯಾವುದೇ ವರದಕ್ಷಿಣೆಗೆ ಬೇಡಿಕೆ ಇಟ್ಟಿಲ್ಲ. ಇದು ಸುಳ್ಳು ಆರೋಪ ಎಂದಿದೆ. ಅಷ್ಟೇ ಅಲ್ಲದೇ, ವಧು ಮದುವೆ ಬಳಿಕ ಗಂಡನ ಮನೆಯಲ್ಲಿ ಇರಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಂಪತಿ ನಡುವೆ ಮಾತಿನ ಚಕಮಕಿ ಆರಂಭವಾಗಿ, ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಮಗೆ ಯಾವುದೇ ವರದಕ್ಷಿಣೆ ಅವಶ್ಯಕತೆ ಇಲ್ಲ ಎಂದು ಆರೋಪಿಯ ತಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ಐಷಾರಾಮಿ ಕಳ್ಳ; 200 ಪ್ಲೈಟ್ಗಳಲ್ಲಿ ಸಂಚಾರ, ವಿಮಾನ ಪ್ರಯಾಣಿಕರೇ ಟಾರ್ಗೆಟ್, ಕೋಟಿಗಟ್ಟಲೇ ದರೋಡೆ