ನವದೆಹಲಿ: ಅಬಕಾರಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಬಂಧನಕ್ಕೆ ಒಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನು ಪಡೆದು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ.
ಈ ಮಧ್ಯೆ ಜೂನ್ 1 ರಂದು ಜಾಮೀನು ಅವಧಿ ಮುಗಿಯಲಿದ್ದು, ಜೂನ್ 2 ರಂದು ತಿಹಾರ್ ಜೈಲು ಅಧಿಕಾರ ಮುಂದೆ ಶರಣಾಗಬೇಕಿದೆ. ಆದರೆ, ತಮಗೆ ಆರೋಗ್ಯ ಸಮಸ್ಯೆಗಳಿದ್ದು, ನೀಡಲಾದ ಜಾಮೀನು ಅವಧಿಯನ್ನು ಒಂದು ವಾರ ಮುಂದೂಡಬೇಕು ಎಂದು ಕೋರಿ ಅವರು ಸೋಮವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸಕ್ಕರೆ ಕಾಯಿಲೆ, ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಾಗಿರುವುದರಿಂದ ಇನ್ನೂ ಒಂದು ವಾರ ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ. ಆರೋಗ್ಯ ಸಮಸ್ಯೆಗಳಿಂದ 7 ಕೆಜಿ ತೂಕ ಕಳೆದುಕೊಂಡಿದ್ದೇನೆ. ಕಿಟೋನ್ ಲೆವೆಲ್ ಹೆಚ್ಚಿದ್ದು ಆತಂಕ ಉಂಟು ಮಾಡಿದೆ. ಹೀಗಾಗಿ ಜಾಮೀನು ಅವಧಿ ವಿಸ್ತರಿಸಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಮೇ 10ರಂದು ಜಾಮೀನು: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ಹಗರಣದಲ್ಲಿ ಬಂಧಿತರಾದ 50 ದಿನಗಳ ಬಳಿಕ ಮೇ 10 ರಂದು 21 ದಿನಗಳ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಜೂನ್ 1ಕ್ಕೆ ಅದರ ಅವಧಿ ಮುಗಿಯಲಿದೆ. ಜೂನ್ 2 ಮಧ್ಯಾಹ್ನದ ಒಳಗೆ ಅವರು ಜೈಲು ಅಧಿಕಾರಿಗಳಿಗೆ ಶರಣಾಗಬೇಕು ಎಂದು ಸುಪ್ರೀಂಕೋರ್ಟ್ ಷರತ್ತು ವಿಧಿಸಿತ್ತು.
ಜೈಲಿನಿಂದ ತಪ್ಪಿಸಿಕೊಳ್ಳಲು ನಾಟಕ - ಬಿಜೆಪಿ ಆರೋಪ: ಅನಾರೋಗ್ಯ ಕಾರಣ ನೀಡಿ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಸಿಎಂ ಕೇಜ್ರಿವಾಲ್ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯನ್ನು ಬಿಜೆಪಿ ಟೀಕಿಸಿದೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಜೈಲಿನಿಂದ ತಪ್ಪಿಸಿಕೊಳ್ಳಲು ಕೇಜ್ರಿವಾಲ್ ನಾಟಕ ಆರಂಭಿಸಿದ್ದಾರೆ ಎಂದಿದ್ದಾರೆ.
ಜಾಮೀನು ಪಡೆದುಕೊಂಡು ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಚುನಾವಣಾ ಪ್ರಚಾರ ಹೇಗೆ ನಡೆಸಿದರು. ದೆಹಲಿಯಲ್ಲಿ ಚುನಾವಣೆ ಮುಗಿದಿದೆ. ಇದೀಗ ಕೇಜ್ರಿವಾಲ್‌ಗೆ ಗಂಭೀರ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗಿರುವುದು ವಿಪರ್ಯಾಸ. ಅದು ನಿಜವಾಗಿದ್ದರೆ ಅವರೇಕೆ ಪಂಜಾಬ್‌ನಲ್ಲಿ ಚುನಾವಣಾ ಪ್ರಚಾರ ನಿಲ್ಲಿಸುತ್ತಿಲ್ಲ. ವೈದ್ಯಕೀಯ ತಪಾಸಣೆಗೆ ಏಕೆ ಹೋಗಿಲ್ಲ ಎಂದು ಪ್ರಶ್ನಿಸಿದ್ದಾರೆ.