ತಿರುವನಂತಪುರಂ: ರೈಲಿನಿಂದ ಪ್ರಯಾಣಿಕನೋರ್ವ ತಳ್ಳಿದ ಪರಿಣಾಮ ಮಂಗಳವಾರ ರಾತ್ರಿ ಓರ್ವ ಟಿಟಿಇ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೋರ್ವ ಟಿಟಿಇ ಮೇಲೆ ಕೇರಳದಲ್ಲಿ ಹಲ್ಲೆ ನಡೆದಿದೆ. ಇಂದು ಬೆಳಗ್ಗೆ ತಿರುವನಂತಪುರ-ಕೋಝಿಕೋಡ್ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ಟಿಟಿಇ ಮೇಲೆ ಭಿಕ್ಷುಕ ದಾಳಿ ಮಾಡಿದ್ದಾನೆ.
ಹಲ್ಲೆಯಿಂದ ಟಿಟಿಇ ಜೈಸನ್ ಜೋಸೆಫ್ ಕಣ್ಣುಗಳಿಗೆ ಗಾಯವಾಗಿದೆ. ತಿರುವಂತಪುರದಲ್ಲಿ ರೈಲು ಆರಂಭಕ್ಕೂ ಮುನ್ನ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಭಿಕ್ಷುಕನೋರ್ವ ಪ್ರಯಾಣಿಕರೊಬ್ಬರ ಜತೆ ಜಗಳಕ್ಕಿಳಿದಿದ್ದ. ಈ ವೇಳೆ ಟಿಟಿಇ ಮಧ್ಯಪ್ರವೇಶಿಸಿದ್ದರು. ಆಗ ಭಿಕ್ಷುಕನ ಬಳಿಕ ಟಿಕೆಟ್ ಇಲ್ಲದಿರುವುದು ಟಿಟಿಇ ಜೈಸನ್ ಅವರಿಗೆ ಗೊತ್ತಾಗಿತ್ತು. ತಕ್ಷಣವೇ ರೈಲಿನಿಂದ ಕೆಳಗಿಳಿಯುವಂತೆ ಸೂಚಿಸಿದ್ದರು. ಅದಾಗಲೇ ರೈಲು ಚಲಿಸುತ್ತಿದ್ದುದರಿಂದ ಟಿಟಿಇ ಕಣ್ಣಿಗೆ ಹೊಡೆದು ಭಿಕ್ಷುಕ ರೈಲಿನಿಂದ ಕೆಳಗೆ ಇಳಿದು ಓಡಿ ಹೋಗಿದ್ದಾನೆ.
ಹಲ್ಲೆ ಮಾಡಿ ಪರಾರಿಯಾದ ಭಿಕ್ಷುಕನ ಬಂಧನಕ್ಕೆ ರೈಲ್ವೆ ಪೊಲೀಸರು ಬಲೆ ಬೀಸಿದ್ದಾರೆ. ಗಾಯಗೊಂಡ ಟಿಟಿಇ ಚಿಕಿತ್ಸೆ ಪಡೆದಿದ್ದಾರೆ. "ಥಂಪನೂರಿನಲ್ಲಿ ಭಿಕ್ಷುಕ ನನ್ನ ಮುಖಕ್ಕೆ ಹೊಡೆದು ಓಡಿ ಹೋಗುತ್ತಿದ್ದ. ಈ ವೇಳೆ ಹಿಡಿಯಲು ಹೋದ ಆಹಾರದ ಪಾಕೆಟ್ ಮಾರಾಟಗಾರನ ಮೇಲೂ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ" ಎಂದು ಜೈಸನ್ ಪ್ರತಿಕ್ರಿಯೆ ನೀಡಿದ್ದಾರೆ.
ರೈಲಿನಿಂದ ತಳ್ಳಿ ಟಿಟಿಇ ಕೊಲೆ: ಚಲಿಸುತ್ತಿದ್ದ ರೈಲಿನಿಂದ ಟಿಟಿಇ ಕೆ.ವಿನೋದ್ ಅವರನ್ನು ಪ್ರಯಾಣಿಕನೋರ್ವ ತಳ್ಳಿ ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿಯಷ್ಟೇ ತ್ರಿಶ್ಯೂರಿನಲ್ಲಿ ಸಂಭವಿಸಿತ್ತು. ಎರ್ನಾಕುಲಂ ನಿವಾಸಿಯಾಗಿರುವ ಟಿಟಿಇ ವಿನೋದ್ ಅವರು ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಮದ್ಯದ ನಶೆಯಲ್ಲಿದ್ದ ವ್ಯಕ್ತಿ ತಳ್ಳಿ ಕೊಲೆ ಮಾಡಿದ್ದ. ಕೊಲೆ ಮಾಡಿದ ಒಡಿಶಾ ಮೂಲದ ರಜನಿಕಾಂತ್ನನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಎರ್ನಾಕುಲಂ-ಪಾಟ್ನಾ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ S1 ಕೋಚ್ನಲ್ಲಿ ಆರೋಪಿ ರಜನಿಕಾಂತ್ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ. ಈ ವೇಳೆ ಟಿಟಿಇ ವಿನೋದ್ ಟಿಕೆಟ್ ಕೇಳಿದ್ದಕ್ಕೆ ಕೋಪಗೊಂಡ ಆರೋಪಿ ವಾಗ್ವಾದಕ್ಕಿಳಿದಿದ್ದ. ಬಳಿಕ ಚಲಿಸುತ್ತಿದ್ದ ರೈಲಿನಿಂದಲೇ ಕೆಳಗೆ ತಳ್ಳಿದ್ದ. ಪರಿಣಾಮ ಟಿಟಿಇ ಮೃತಪಟ್ಟಿದ್ದರು. ಈ ಕುರಿತು ಇತರೆ ಪ್ರಯಾಣಿಕರು ಮಾಹಿತಿ ನೀಡಿದ ಆಧಾರದ ಮೇಲೆ ಪಾಲಕ್ಕಾಡ್ ಪೊಲೀಸರು ಆಗಮಿಸಿ, ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಿಂದ ಟಿಟಿಯನ್ನು ತಳ್ಳಿದ ಟಿಕೆಟ್ರಹಿತ ಪ್ರಯಾಣಿಕ! - Passenger Pushes TTE from Train