ಕೋಲ್ಕತ್ತಾ (ಪಶ್ಚಿಮಬಂಗಾಳ): ಲೋಕಸಭೆ ಚುನಾವಣೆಯ ವೇಳೆ ಎನ್ಡಿಎ ಕೂಟದ ವಿರುದ್ಧ ಹೋರಾಡಲು ವಿಪಕ್ಷಗಳೆಲ್ಲ ಸೇರಿ ರೂಪಿಸಿಕೊಂಡಿರುವ I.N.D.I.A ಕೂಟದಲ್ಲಿ ಇದ್ದೂ ಇಲ್ಲದಂತೆ ನಡೆದುಕೊಂಡಿದ್ದ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಇದೀಗ ಅಧಿಕೃತವಾಗಿ ಗುಂಪಿನಲ್ಲಿದ್ದೇನೆ ಎಂಬುದನ್ನು ತೋರಿಸುತ್ತಿದ್ದಾರೆ.
ಅಚ್ಚರಿಯ ಬೆಳಗಣಿಗೆಯಲ್ಲಿ, ಜುಲೈ 21 ರಂದು ಕೋಲ್ಕತ್ತಾದಲ್ಲಿ ಟಿಎಂಸಿ ಆಯೋಜಿಸಿರುವ ಹುತಾತ್ಮರ ದಿನಾಚರಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ, ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಭಾಗವಹಿಸಲಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಜೆಟ್ ಅಧಿವೇಶನದ ಮಧ್ಯೆ ನಡೆಯುತ್ತಿರುವ ಈ ರ್‍ಯಾಲಿಯಲ್ಲಿ ಇಂಡಿಯಾ ಕೂಟದ ನಾಯಕರು ಒಂದಾಗುತ್ತಿರುವುದು ವಿಶೇಷವಾಗಿದೆ.
ಅಖಿಲೇಶ್ ಯಾದವ್ ಅವರು ಭಾನುವಾರ ನಡೆಯುವ ಟಿಎಂಸಿ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ಅಧಿಕೃತಗೊಳಿಸಿವೆ. ವಿಮಾನ ನಿಲ್ದಾಣದಿಂದ ನೇರವಾಗಿ ಅವರು ಕಾರ್ಯಕ್ರಮದ ವೇದಿಕೆಗೆ ಬರಲಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಅವರ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಅಖಿಲೇಶ್ ಯಾದವ್ ಜೊತೆಗೆ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಮತ್ತು ಮೀನುಗಾರಿಕೆ ಇಲಾಖೆಯ ಮಾಜಿ ಸಚಿವ ಕಿರಣ್ಮೋಯ್ ನಂದಾ ಅವರು ಕೂಡ ಪಾಲ್ಗೊಳ್ಳಲಿದ್ದಾರೆ.
'ಇಂಡಿಯಾ' ಬಲ ಪ್ರದರ್ಶನ: ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಕಿರಣ್ಮೋಯ್ ನಂದಾ ಅವರು, "ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರು ಮುಂದಿದ್ದಾರೆ. ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹೋರಾಡಲು ಮಮತಾ ಬ್ಯಾನರ್ಜಿ ಅವರ ಉಪಸ್ಥಿತಿ ಅಗತ್ಯ ಎಂಬುದನ್ನು ಸಮಾಜವಾದಿ ಪಕ್ಷ ಅರಿತಿದೆ. ಹೀಗಾಗಿ ನಾಳಿನ ಕಾರ್ಯಕ್ರಮದಲ್ಲಿ ಮಮತಾ ಅವರ ಜೊತೆಗೆ ಅಖಿಲೇಶ್ ನಿಲ್ಲುವ ಮೂಲಕ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮತ್ತಷ್ಟು ನಾಯಕರು ಬರುವ ಸಾಧ್ಯತೆ ಇದೆ. ಕೇಂದ್ರ ಬಜೆಟ್ ಅಧಿವೇಶನ ಇರುವ ಕಾರಣ ಯಾವೆಲ್ಲಾ ನಾಯಕರು ಭಾಗವಹಿಸಲಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಇತ್ತೀಚಿಗಿನ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ, ಇಂಡಿಯಾ ಕೂಟದ ಪ್ರಬಲ ಪಕ್ಷವಾಗಿದೆ. ರಾಷ್ಟ್ರ ರಾಜಕಾರಣದದಲ್ಲಿ ಟಿಎಂಸಿ ಪ್ರಾಮುಖ್ಯತೆ ಸಾಕಷ್ಟು ಹೆಚ್ಚಾಗಿದೆ ಎಂದರು.
ಅಖಿಲೇಶ್ ಮತ್ತು ಮಮತಾ ರಾಜಕೀಯ ವಲಯದಲ್ಲಿ ಉತ್ತಮ ಸಂಬಂಧ ಉಳಿಸಿಕೊಂಡಿದ್ದಾರೆ. ಹೀಗಾಗಿ ಅಖಿಲೇಶ್ ಅವರು ಕೋಲ್ಕತ್ತಾದಲ್ಲಿ ನಡೆಯುವ ಹುತಾತ್ಮ ದಿನಾಚರಣೆ ರ್‍ಯಾಲಿಯಲ್ಲಿ ಕೇಂದ್ರ ಬಜೆಟ್ ಅಥವಾ ಇತರ ಎಲ್ಲ ಕಾರ್ಯಕ್ರಮಗಳನ್ನು ಬಿಟ್ಟು ಭಾಗವಹಿಸುತ್ತಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಯುಪಿಎಸ್ಸಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ: ಹುದ್ದೆ ತೊರೆಯಲು ಕಾರಣವೇನು ಗೊತ್ತಾ? - UPSC CHAIRMAN RESIGNS