ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಸತತ 3ನೇ ಅವಧಿಗೆ ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ (ಎನ್ಎಸ್ಎ) ನೇಮಕಗೊಂಡಿದ್ದಾರೆ. ಇದೇ ವೇಳೆ, ಡಾ.ಪಿ.ಕೆ.ಮಿಶ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕ ಮಾಡಲಾಗಿದೆ.
ಡಾ.ಪಿ.ಕೆ.ಮಿಶ್ರಾ ಮತ್ತು ಅಜಿತ್ ದೋವಲ್ ಮರುನೇಮಕದೊಂದಿಗೆ, ಇಬ್ಬರು ನಿವೃತ್ತ ಅಧಿಕಾರಿಗಳು ಪ್ರಧಾನ ಮಂತ್ರಿಯೊಬ್ಬರಿಗೆ ಸುದೀರ್ಘವಾಗಿ ಸೇವೆ ಸಲ್ಲಿಸಿದ ಪ್ರಧಾನ ಸಲಹೆಗಾರರಾಗುತ್ತಿದ್ದಾರೆ.
1968 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಜಿತ್ ದೋವಲ್, ಭಯೋತ್ಪಾದನಾ ನಿಗ್ರಹ ತಜ್ಞ ಹಾಗೂ ಪರಮಾಣು ಸಮಸ್ಯೆಗಳ ಪರಿಣಿತರು. ಐಬಿ ಕಾರ್ಯಕಾರಿ ಮುಖ್ಯಸ್ಥರಾಗಿಯೂ ಇವರು ಸೇವೆ ಸಲ್ಲಿಸಿದ್ದರು.
ಡಾ.ಮಿಶ್ರಾ 1972ರ ಬ್ಯಾಚ್‌ನ ನಿವೃತ್ತ ಅಧಿಕಾರಿಯಾಗಿದ್ದು, ಭಾರತ ಸರ್ಕಾರಕ್ಕೆ ಕೃಷಿ ಕಾರ್ಯದರ್ಶಿಯಾಗಿದ್ದರು. ನಿವೃತ್ತಿಯ ನಂತರ ಕಳೆದೊಂದು ದಶಕದಿಂದ ಪ್ರಧಾನಿ ಮೋದಿ ಅವರೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರಿಗೂ ಅವರ ಸೇವಾವಧಿಯಲ್ಲಿ ಕ್ಯಾಬಿನೆಟ್ ಮಂತ್ರಿ ಶ್ರೇಣಿಯ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನು, ಅಮಿತ್ ಖರೆ ಮತ್ತು ತರುಣ್ ಕಪೂರ್ ಅವರನ್ನು ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ ನೇಮಿಸಲಾಗಿದೆ. ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ, ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿಯಲ್ಲಿ 2 ವರ್ಷಗಳ ಅವಧಿಗೆ ಮುಂದಿನ ಆದೇಶದವರೆಗೆ ಈ ನೇಮಕ ಮಾಡಲಾಗಿದೆ.